ಶಿವಮೊಗ್ಗ, ಮೇ 03 (DaijiworldNews/DB): ಸೊರಬದಲ್ಲಿ ನಾಪತ್ತೆಯಾಗಿದ್ದ ಬಿಜೆಪಿ ಮುಖಂಡನನ್ನು ರಾಜಕೀಯ ವೈರಿಗಳೇ ಕೊಲೆ ಮಾಡಿರುವ ರಹಸ್ಯವನ್ನು ಪೊಲೀಸರು ಬೇಧಿಸಿದ್ದಾರೆ. ಮಹಿಳೆ ವಿಚಾರಕ್ಕೆ ರಾಜಕೀಯ ವೈರಿಯಿಂದ ಕೊಲೆಯಾದ ಮಹತ್ವದ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಏ.11ರಂದು ಸೊರಬ ತಾಲೂಕಿನ ಮನ್ಮನೆ ಗ್ರಾಮದ ನಿವಾಸಿ, ಬಿಜೆಪಿ ಮುಖಂಡ ಲೇಖಪ್ಪ ಜಮೀನು ಕೆಲಸಕ್ಕೆಂದು ತೆರಳಿದವರು ಮನೆಗೆ ವಾಪಸ್ಸಾಗದ ಹಿನ್ನೆಲೆಯಲ್ಲಿ ಏ.14ರಂದು ಕುಟುಂಬಸ್ಥರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಬಳಿಕ ಮೇ 2ರಂದು ಲೇಖಪ್ಪ ಅವರ ಸಹೋದರ ನೀಡಿದ ಸುಳಿವು ಮೇರೆಗೆ ಶಂಕಿತ ಆರೋಪಿ ಕೃಷ್ಣಪ್ಪ ಎಂಬುವವನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಲೇಖಪ್ಪನನ್ನು ಕೊಲೆ ಮಾಡಿರುವ ರಹಸ್ಯ ಬಯಲಾಗಿದೆ.
ಲೇಖಪ್ಪ ಮತ್ತು ಕೃಷ್ಣಪ್ಪನ ನಡುವೆ ರಾಜಕೀಯ ವೈಷಮ್ಯವಿತ್ತು. ಈ ನಡುವೆ ಕೃಷ್ಣಪ್ಪ ಸಲುಗೆಯಿಂದಿದ್ದ ಮಹಿಳೆಯೋರ್ವಳೊಂದಿಗೆ ಲೇಖಪ್ಪನೂ ಹತ್ತಿರವಾಗತೊಡಗಿದ್ದ. ಇದರಿಂದ ಕೋಪಗೊಂಡಿದ್ದ ಕೃಷ್ಣಪ್ಪ ಲೇಖಪ್ಪನ ಕೊಲೆಗೆ ಸಂಚು ರೂಪಿಸಿದ್ದ. ಇದೇ ಕಾರಣದಿಂದ ಆತನನ್ನು ನಿನಗೆ ಮದುವೆಯಾಗಲು ಹುಡುಗಿ ತೋರಿಸುತ್ತೇನೆ ಭೇಟಿಯಾಗು ಎಂದು ಕರೆಸಿಕೊಂಡಿದ್ದ ಕೃಷ್ಣಪ್ಪ ಟವಲ್ನಿಂದ ಲೇಖಪ್ಪನ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಅಲ್ಲದೆ, ಸಂಶಯ ಬರಬಾರದೆಂದು ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿಸಿ ಬೈಕ್ ಮೇಲೆ ಇಟ್ಟು ತಂದು ಸೊರಬ ತಾಲೂಕಿನ ಕಡಸೂರು ಗ್ರಾಮದ ಹೊಳೆಗೆ ಎಸೆದಿದ್ದ ಎಂಬ ಮಾಹಿತಿ ಲಭ್ಯವಾಗಿದೆ ಎಂಬುದಾಗಿ ವರದಿಯಾಗಿದೆ.