ಬೆಂಗಳೂರು, ಮೇ 03 (DaijiworldNews/HR): ಕೇಂದ್ರ ಗೃಹಸಚಿವ ಅಮಿತ್ ಷಾ ಅವರು ಇಂದು ಪಕ್ಷದ ಪ್ರಮುಖರ ಜೊತೆ ನಡೆಸಬೇಕಾದ ಮಹತ್ವದ ಸಭೆಯನ್ನು ಕೊನೆ ಕ್ಷಣದಲ್ಲಿ ರದ್ದುಪಡಿಸಿರುವುದಾಗಿ ತಿಳಿದು ಬಂದಿದೆ.
ಇಂದು 3 ಗಂಟೆಗೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಕೋರ್ ಕಮಿಟಿ ಸದಸ್ಯರು, ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ವಿವಿಧ ಮೋರ್ಚಾಗಳ ಪ್ರಮುಖರು, ಸಚಿವರು ಸೇರಿದಂತೆ ಒಟ್ಟು 60 ಪ್ರಮುಖ ಪದಾಕಾರಿಗಳ ಜೊತೆ ಅಮಿತ್ ಷಾ ಸಭೆಯನ್ನು ನಡೆಸುವ ಕಾರ್ಯಕ್ರಮ ನಿಗದಿಯಾಗಿದ್ದು, ಇದಕ್ಕಾಗಿ ಖಾಸಗಿ ಹೋಟೆಲ್ನಲ್ಲಿ ಸಿದ್ದತೆಗಳನ್ನು ಕೈಗೊಳ್ಳಲಾಗಿತ್ತು. ಆದರೆ ಬೆಳಗ್ಗೆ 10 ಗಂಟೆಗೆ ಏಕಾಏಕಿ ಪಕ್ಷದ ಪ್ರಮುಖರ ಜೊತೆ ನಿಗದಿಯಾಗಿದ್ದ ಚರ್ಚೆಯನ್ನು ಅಮಿತ್ ಷಾ ಅವರು ದಿಢೀರನೆ ರದ್ದುಪಡಿಸಿದ್ದಾರೆ.
ಇನ್ನು 40% ಕಮೀಷನ್ ಆರೋಪ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ, ಸಚಿವ ಈಶ್ವರಪ್ಪ ರಾಜೀನಾಮೆ, ಪಿಎಸ್ಐ ನೇಮಕಾತಿ ಅಕ್ರಮ, ಪರೀಕ್ಷೆ ರದ್ದುಪಡಿಸಿರುವುದು ವಿದ್ಯಾರ್ಥಿಗಳ ಪ್ರತಿಭಟನೆ, ಸಚಿವರೊಬ್ಬರ ಹಸ್ತಕ್ಷೇಪದ ಆರೋಪ, ಸಚಿವ ಸಂಪುಟ ವಿಸ್ತರಣೆ, ಪುನಾರಚನೆ, ಪಕ್ಷ ಸಂಘಟನೆ ಸೇರಿದಂತೆ ಹತ್ತು ಹಲವು ಪ್ರಮುಖವ ವಿಷಯಗಳ ಬಗ್ಗೆ ಅಮಿತ್ ಷಾ ರಾಜ್ಯ ಘಟಕದ ನಾಯಕರಿಂದ ಮಾಹಿತಿ ಪಡೆಯಲಿದ್ದಾರೆ ಎಂಬ ಸುದ್ದಿ ಹರಡಿದೆ.