ನವದೆಹಲಿ, ಮೇ 03(DaijiworldNews/MS): ದೇಶದಲ್ಲಿ ಹಿಂದಿಯೂ ಹೆಚ್ಚು ಜನ ಮಾತನಾಡುವ ಭಾಷೆಯಾಗಿದ್ದರೂ, ಹಿಂದಿಯೇತರ ಭಾಷೆಗಳನ್ನು ಮಾತನಾಡುವ ರಾಜ್ಯಗಳ ಮೇಲೆ ಅದನ್ನು ಹೇರಲು ಸಾಧ್ಯವಿಲ್ಲ, ಏಕೆಂದರೆ ಈ ಭಾಷೆಯನ್ನು "ಸಂವಿಧಾನದಲ್ಲಿ ರಾಷ್ಟ್ರೀಯ ಭಾಷೆ" ಎಂದು ಉಲ್ಲೇಖಿಸಲಾಗಿಲ್ಲ ಎಂದು ಗಾಯಕ ಸೋನು ನಿಗಮ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ಕನ್ನಡ ನಟ ಸುದೀಪ್ ನಡುವಿನ ಟ್ವಿಟ್ ವಾರ್ ಬಳಿಕ ಈ ವಿವಾದ ರಾಷ್ಟ್ರದ ಗಮನ ಸೆಳೆದ್ದು, ಈ ಹಿನ್ನಲೆಯಲ್ಲಿ ಸೋನು ನಿಗಮ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ನನಗಿರುವ ಮಾಹಿತಿಯಂತೆ, ಭಾರತದ ಸಂವಿಧಾನದಲ್ಲಿ ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಉಲ್ಲೇಖಿಸಲಾಗಿಲ್ಲ, ನಾನು ಈ ಬಗ್ಗೆ ತಜ್ಞರನ್ನು ಸಂಪರ್ಕಿಸಿಯೂ ಮಾಹಿತಿ ಸಂಗ್ರಹಿಸಿದೆ. ಹಿಂದಿ ದೇಶದಲ್ಲಿ ಹೆಚ್ಚು ಮಾತನಾಡುವ ಭಾಷೆಯಾಗಿದೆ, ನಾನು ಅದನ್ನು ಅರ್ಥಮಾಡಿಕೊಂಡಿದ್ದೇನೆ. ತಮಿಳು ಪ್ರಪಂಚದ ಅತ್ಯಂತ ಹಳೆಯ ಭಾಷೆ ಎಂದು ನಮಗೆ ತಿಳಿದಿದೆಯೇ? ಸಂಸ್ಕೃತ ಮತ್ತು ತಮಿಳು ಇವೆರಡರ ನಡುವೆ ಯಾವುದು ಪುರಾತನ ಭಾಷೆ ಎಂದು ಚರ್ಚೆ ನಡೆಯುತ್ತಿದೆ. ಇಡೀ ಪ್ರಪಂಚದಲ್ಲಿ ತಮಿಳು ಅತ್ಯಂತ ಹಳೆಯ ಭಾಷೆ ಎಂದು ಜನರು ಹೇಳುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಹಲವು ಆಂತರಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ದೇಶದಲ್ಲಿ ಭಾಷಾ ವಿವಾದವು ಅನಗತ್ಯ ಉದ್ವಿಗ್ನತೆಯನ್ನು ಉಂಟುಮಾಡುತ್ತದೆ. ಹಿಂದಿಯಲ್ಲೇ ಮಾತನಾಡಬೇಕು ಎಂದು ಇತರರ ಮೇಲೆ ಭಾಷೆಯನ್ನು ಹೇರುವ ಮೂಲಕ ನಾವು ದೇಶದಲ್ಲಿ ಅಸಂಗತತೆಯನ್ನು ಸೃಷ್ಟಿಸುತ್ತಿದ್ದೇವೆ. ಮಾತನಾಡಲು ಬಯಸುವ ಭಾಷೆಯ ಬಗ್ಗೆ ನಿರ್ಧರಿಸುವ ಹಕ್ಕು ಜನರಿಗೆ ಇದೆ ಎಂದು ಸೋನು ನಿಗಮ್ ಹೇಳಿದ್ದಾರೆ.