ಚಿತ್ರದುರ್ಗ, ಮೇ 03 (DaijiworldNews/DB): ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ತನಿಖೆ ನಡೆಯುತ್ತಿದೆ. ತನಿಖಾ ಹಂತದಲ್ಲಿರುವಾಗ ಕಾಂಗ್ರೆಸ್ ಬೇಕಾಬಿಟ್ಟಿ ಆರೋಪ ಮಾಡುವುದು ಸಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ಅಕ್ರಮದಲ್ಲಿ ಕೈಜೋಡಿಸಿದ ಹಲವು ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ, ತನಿಖೆ ನಡೆಯುತ್ತಿದ್ದು, ಇನ್ನೂ ಯಾರ್ಯಾರ ಪಾತ್ರ ಇದೆ ಎಂದು ಗೊತ್ತಾಗಲಿದೆ. ಹಿಂದೆಯೂ ಇಂತಹ ಅಕ್ರಮ ಘಟಿಸಿದ್ದು, ಈಗ ಕಾಂಗ್ರೆಸ್ಸಿಗರು ಬಿಜೆಪಿ ಕಡೆ ಬೆರಳು ತೋರಿಸುತ್ತಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿ ಇರುವಾಗ ಇಂತಹ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದರು.
ಸಚಿವರಾದ ಅಶ್ವತ್ಥ ನಾರಾಯಣ, ಆರಗ ಜ್ಞಾನೇಂದ್ರ ಅವರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ನಾಯಕರ ಹೇಳಿಕೆಯಲ್ಲಿ ಹುರುಳಿಲ್ಲ. ಅವರು ದಿನಕ್ಕೊಂದು ಹೆಸರುಗಳನ್ನು ಹೇಳುತ್ತಾ ಹೋಗುತ್ತಾರೆ. ಪ್ರಿಯಾಂಕ್ ಖರ್ಗೆ ಹೇಳಿದ ಕೂಡಲೇ ಗೃಹ ಸಚಿವರು ರಾಜೀನಾಮೆ ಕೊಡಬೇಕೆಂದಿಲ್ಲ. ಕಾನೂನಿನ ಚೌಕಟ್ಟಿನಲ್ಲೇ ಎಲ್ಲರೂ ಇರುತ್ತಾರೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿದ್ದರಾಮಯ್ಯ ಆಡಳಿತದಲ್ಲಿರುವಾಗ ಯಾವುದೇ ಸಾಧನೆ, ಅಭಿವೃದ್ದಿ ಕಾರ್ಯ ನಡೆದಿಲ್ಲ. ಇದನ್ನು ಮುಚ್ಚಿ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನವಾಗಿ ಕಾಂಗ್ರೆಸ್ನವರು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಬದಲಾವಣೆ ಎಂಬುದು ಕೇವಲ ಗಾಳಿ ಸುದ್ದಿ. ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದು, ಈ ಅವಧಿಯಲ್ಲಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.