ತೆಲಂಗಾಣ, ಮೇ 03(DaijiworldNews/MS): ಒಸ್ಮಾನಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ವಿವಿ ಆಡಳಿತ ಮಂಡಳಿ ಅನುಮತಿ ನಿರಾಕರಿಸಿದೆ.
ಕಾಂಗ್ರೆಸ್ ಪಕ್ಷದ ಸಂಸದ ರಾಹುಲ್ ಗಾಂಧಿ ಮೇ 6 ಮತ್ತು 7ರಂದು ತೆಲಂಗಾಣಕ್ಕೆ ಭೇಟಿ ನೀಡಲು ನಿರ್ಧರಿಸಿದ್ದು ಹೀಗಾಗಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸುವುದಕ್ಕಾಗಿ ಕಾಂಗ್ರೆಸ್ ಸಿದ್ದತೆ ನಡೆಸಿತ್ತು.ಆದರೆ ಉಸ್ಮಾನಿಯಾ ವಿವಿಗೆ ರಾಹುಲ್ ಗಾಂಧಿ ಭೇಟಿ ನೀಡುವುದಕ್ಕೆ ಆಡಳಿತ ಮಂಡಳಿ ಅನುಮತಿ ಕೊಡಲು ನಿರಾಕರಿಸಿದೆ. ಕ್ಯಾಂಪಸ್ ನೊಳಗೆ ರಾಜಕೀಯ ಸಭೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಉಸ್ಮಾನಿಯಾ ವಿವಿ ಅಧಿಕಾರಿಗಳು ತಿಳಿಸಿದ್ದಾರೆ.ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಒತ್ತಡ ಹೇರಿರುವುದೇ ಅನುಮತಿ ನಿರಾಕರಣೆಗೆ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಹುಲ್ ಗಾಂಧಿಯವರ ಉಸ್ಮಾನಿಯಾ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡುವುದು ಸಾರ್ವಜನಿಕ ಸಭೆಗಾಗಿ ಅಲ್ಲ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ಎಂದು ತೆಲಂಗಾಣ ಕಾಂಗ್ರೆಸ್ ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ.