ಜೋಧ್ಪುರ, ಮೇ 03 (DaijiworldNews/DB): ಕೇಸರಿ ಧ್ವಜವನ್ನು ತೆಗೆದು ಇಸ್ಲಾಮಿಕ್ ಧ್ವಜವನ್ನು ಹಾಕಿದ ವಿಚಾರದಿಂದಾಗಿ ಎರಡು ಸಮುದಾಯದ ಯುವಕರ ನಡುವೆ ಮಾತಿಗೆ ಮಾತು ಬೆಳೆದು ಹಿಂಸಾತ್ಮಕ ಘರ್ಷಣೆ ನಡೆದ ಘಟನೆ ಸೋಮವಾರ ರಾತ್ರಿ ಜೋಧ್ಪುರ ನಗರದಲ್ಲಿ ನಡೆದಿದೆ.
ಈದ್-ಉಲ್-ಫಿತರ್ ಮತ್ತು ಅಕ್ಷಯ ತೃತೀಯಾ ಹಬ್ಬದ ಮುನ್ನಾ ದಿನ ರಾತ್ರಿ ನಗರದ ಬಲ್ಮುಕಂದ್ ಬಿಸ್ಸಾ ವೃತ್ತದಲ್ಲಿ ಒಂದು ಸಮುದಾಯದ ಗುಂಪು ಕೇಸರಿ ಧ್ವಜವನ್ನು ತೆಗೆದು ಇಸ್ಲಾಮಿಕ್ ಧ್ವಜವನ್ನು ಹಾಕಿತ್ತು. ಇದರಿಂದ ಕೋಪಗೊಂಡ ಹಿಂದೂ ಸಂಘಟನೆಯ ಯುವಕರು ಇನ್ನೊಂದು ಗುಂಪನ್ನು ಪ್ರಶ್ನಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಮಾತಿನ ಚಕಮಕಿ ನಡೆದು ಗೇಟ್ ಛೇದಕದಲ್ಲಿ ಇತ್ತಂಡಗಳ ನಡುವೆ ಘರ್ಷಣೆ ನಡೆದಿದೆ. ಇದು ಹಿಂಸಾಚಾರಕ್ಕೆ ತಿರುಗಿ ಕಲ್ಲು ತೂರಾಟವೂ ನಡೆದಿದ್ದು, ಗುಂಪುಗಳನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಘಟನೆಯ ವರದಿಗಾಗಿ ತೆರಳಿದ್ದ ಮಾಧ್ಯಮದವರ ಮೇಲೆ ಪೊಲೀಸರು ಕೋಪಗೊಂಡಿದ್ದು, ನಾಲ್ವರು ಪತ್ರಕರ್ತರಿಗೆ ಹೊಡೆದಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಪರಿಸರದಲ್ಲಿ ಬಿಗುವಿನ ಸ್ಥಿತಿ ಮುಂದುವರಿದಿದೆ. ಅಲ್ಲದೆ, ಮುಂಜಾಗ್ರತೆ ಸಲುವಾಗಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಜೋಧ್ಪುರ ವಿಭಾಗೀಯ ಆಯುಕ್ತ ಹಿಮಾಂಶು ಗುಪ್ತಾ ತಿಳಿಸಿದ್ದಾರೆ.