ಬೆಂಗಳೂರು, ಮೇ 02 (DaijiworldNews/SM): ಗಡಿ ವಿಚಾರದಲ್ಲಿ ಮಹಾರಾಷ್ಟ್ರದ ಜೊತೆಗೆ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ನೆರೆ ರಾಜ್ಯ ಮಹಾರಾಷ್ಟ್ರಕ್ಕೆ ಒಂದಿಂಚೂ ಭೂಮಿ ಬಿಟ್ಟು ಕೊಡಲಾರೆವು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ರದ ರಾಜಕಾರಣಿಗಳು ತಮ್ಮ ರಾಜಕೀಯ ಉಳಿವಿಗಾಗಿ ಭಾಷೆ ಅಥವಾ ಗಡಿ ವಿವಾದವನ್ನು ಬಳಸಿಕೊಳ್ಳಬೇಡಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರು ಕರ್ನಾಟಕದ ಗಡಿ ವಿಚಾರದ ಬಗ್ಗೆ ನೀಡಿದ ಹೇಳಿಕೆಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ರಾಜಕಾರಣದ ಬಿಕ್ಕಟ್ಟು ಆರಂಭಗೊಳ್ಳುತ್ತದೆ ಆ ಸಂದರ್ಭದಲ್ಲಿ ಅವರು ಗಡಿ ವಿಚಾರವನ್ನು ಆರಂಭಿಸುತ್ತಾರೆ. ಆದರೆ, ಗಡಿ ವಿಚಾರದಲ್ಲಿ ಕರ್ನಾಟಕದಿಂದ ಯಾವುದೇ ರಾಜಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.