ನವದೆಹಲಿ, ಮೇ 02 (DaijiworldNews/MS): ಪ್ರಧಾನಿಯ 8 ವರ್ಷಗಳ ದುರಾಡಳಿತವು ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಹೇಗೆ ಹಾಳುಮಾಡುವುದು ಎಂಬುವುದರ ನಿದರ್ಶನವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರಸ್ತುತ ವಿದ್ಯುತ್ ಬಿಕ್ಕಟ್ಟು, ನಿರುದ್ಯೋಗ, ಹೆಚ್ಚುತ್ತಿರುವ ಹಣದುಬ್ಬರ ಮತ್ತು ರೈತರ ಬಿಕ್ಕಟ್ಟು ಮುಂತಾದ ಹಲವಾರು ವಿಷಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಈ ದುರಾಡಳಿತ ಒಂದು ಕೇಸ್ ಸ್ಟಡಿ ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.
ಬಿಸಿಗಾಳಿಯ ಪ್ರಕ್ಷುಬ್ಧತೆಯ ನಡುವೆಯೇ ಹಲವು ರಾಜ್ಯಗಳು ವಿದ್ಯುತ್ ಕೊರತೆ ಎದುರಿಸುತ್ತಿದೆ. ಅಲ್ಲದೆ ಹಲವು ಕೈಗಾರಿಕೆಗಳು ಕಲ್ಲಿದ್ದಲು ಕೊರತೆಯಿಂದಾಗಿ ಉತ್ಪಾದನೆಯನ್ನು ಕಡಿತಗೊಳಿಸುತ್ತಿವೆ.
ಎರಡು ದಿನಗಳ ಹಿಂದೆಯಷ್ಟೇ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಕೂಡ ಟ್ವಿಟರ್ನಲ್ಲಿ ದೇಶದಲ್ಲಿ ಎದುರಾಗುತ್ತಿರುವ ವ್ಯಾಪಕ ವಿದ್ಯುತ್ ಕಡಿತದ ವಿಷಯದ ಬಗ್ಗೆ ಮೋದಿ ಸರ್ಕಾರವನ್ನು ಟೀಕಿಸಿದ್ದರು.