ಹೊಸಪೇಟೆ, ಮೇ 02 (DaijiworldNews/MS): ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹತ್ತಾರು ಹಗರಣಗಳು ನಡೆದಿದ್ದು, ಎಲ್ಲವನ್ನು ಮುಚ್ಚಿ ಹಾಕಿ ಯಾವುದರ ಬಗ್ಗೆಯೂ ತನಿಖೆ ನಡೆಸಿರಲಿಲ್ಲ. ಆದರೆ ನಾವು ಕಾಂಗ್ರೆಸ್ನಂತೆ ಹಗರಣಗಳನ್ನು ಮುಚ್ಚಿ ಹಾಕುತ್ತಿಲ್ಲ. ತನಿಖೆ ನಡೆಸುತ್ತಿದ್ದು ತಪ್ಪಿತಸ್ಥರು ಎಷ್ಟೇ ಪ್ರಭಾವಿಶಾಲಿಯಾಗಿದ್ದರೂ ಅವರನ್ನು ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಹೇಳಿದ್ದಾರೆ.
ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎನ್ನುವುದು ಗೊತ್ತಾದ ಕೂಡಲೇ ನಮ್ಮ ಸರ್ಕಾರ ಸಿಐಡಿಯಿಂದ ತನಿಖೆ ಆರಂಭಿಸಿದೆ. ಕಲ್ಲು ಹೊಡೆದು ಓಡುವ ಗುಣ ಕಾಂಗ್ರೆಸ್ಸಿನವರದ್ದು ಆದರೆ ಪರೀಕ್ಷೆ ಅಕ್ರಮದಲ್ಲಿ ಕಾಂಗ್ರೆಸ್ಸಿನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕಾಂಗ್ರೆಸ್ ತಲೆಗಳೇ ಹೆಚ್ಚು ಉರುಳುವುದು ಖಂಡಿತಾ ಎಂದು ಕಟೀಲ್ ಹೇಳಿದ್ದಾರೆ.
ಅಕ್ರಮದ ನಡೆದಿದೆ ಎನ್ನುವುದು ಗೊತ್ತಾದ ತಕ್ಷಣ ನಮ್ಮ ಸರ್ಕಾರ ಸಿಐಡಿಯಿಂದ ತನಿಖೆ ಆರಂಭಿಸಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವರನ್ನು ಬಂಧಿಸಲಾಗಿದೆ. ಪಾರದರ್ಶಕವಾಗಿ ತನಿಖೆ ನಡೆಯುತ್ತಿದ್ದು, ನಮ್ಮ ಪಕ್ಷವಾಗಲಿ, ಸರ್ಕಾರವಾಗಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ನಮ್ಮ ಪಕ್ಷ ನಿಂತ ನೀರಲ್ಲ , ಇಲ್ಲಿ ಬದಲಾವಣೆಗಳು ನಿರಂತರ ಇದೇ ದೃಷ್ಟಿಕೋನದಿಂದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಪಕ್ಷದಲ್ಲಿನ ಬದಲಾವಣೆ ಕುರಿತು ಮಾತುಗಳನ್ನಾಡಿದ್ದಾರೆ. ಇದರಲ್ಲಿ ವೇರೆ ವಿಶೇಷ ಇಲ್ಲ. ಅಲ್ಲದೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲೇ ಮುಂದಿನ ವಿಧಾನಸಭೆ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದ್ದಾರೆ.