ಬೆಂಗಳೂರು, ಮೇ 02 (DaijiworldNews/DB): ಪಕ್ಷಾಂತರ ಮಾಡುವುದು ತಪ್ಪು ಎಂಬರ್ಥದಲ್ಲಿ ಮಾತನಾಡಿದ್ದೇನೆಯೇ ಹೊರತು ಬಿಜೆಪಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು ಸ್ಪಷ್ಟಪಡಿಸಿದ್ದಾರೆ.
ಪಕ್ಷಾಂತರ ಮಾಡಿ ತಪ್ಪು ಮಾಡಿದೆ ಎಂಬ ಹೇಳಿಕೆ ಬಗ್ಗೆ ಸೋಮವಾರ ಸ್ಪಷ್ಟನೆ ನೀಡಿದ ಅವರು, ನನ್ನ ಹೇಳಿಕೆ ನೈತಿಕ ಮತ್ತು ಸೈದ್ದಾಂತಿಕವಾಗಿತ್ತು. ಯಾರೇ ಆಗಲಿ ಪಕ್ಷಾಂತರ ಮಾಡುವುದು ಸರಿಯಲ್ಲ ಎಂಬರ್ಥದಲ್ಲಿ ಹೇಳಿದ್ದೇನೆ ಎಂದರು.
ನಾನು ನನ್ನ ಜೀವನದಲ್ಲಿ ಮಾಡಿದ ಒಂದೇ ಒಂದು ತಪ್ಪೆಂದರೆ ಅದು ಪಕ್ಷಾಂತರ ಮಾಡಿದ್ದು ಎಂದಿದ್ದೇನೆಯೇ ಹೊರತು ಬಿಜೆಪಿಗೆ ಬಂದಿರುವುದು ತಪ್ಪು ಎಂದಾಗಲೀ, ಅಸಮಾಧಾನ ಇದೆ ಎಂದಾಗಲೀ ಆ ಮಾತನ್ನು ಹೇಳಿಲ್ಲ. ಬಿಜೆಪಿಯಲ್ಲಿ ನನ್ನನ್ನು ವಿಶ್ವಾಸದಿಂದಲೇ ಕಾಣುತ್ತಿದ್ದಾರೆ ಎಂದರು.