ಬೆಂಗಳೂರು, ಮೇ 02 (DaijiworldNews/DB): ರಾಮನಗರದಲ್ಲಿ ಗಂಡಸರು ಯಾರಿಲ್ಲ. ನಾವೆಲ್ಲ ಹೆಂಗಸರು. ಪಾಪ ಉಸ್ತುವಾರಿ ಸಚಿವರೊಬ್ಬರೇ ಗಂಡಸರು ಆಗಿರಬೇಕು. ಅದಕ್ಕೆ ಅವರು ಗಂಡಸರು ಯಾರಿದ್ದಾರೆ ಎಂದು ಕೇಳುತ್ತಿದ್ದಾರೆ ಎಂದು ಬಿಜೆಪಿ ಸಚಿವರೊಬ್ಬರ ಹೆಸರು ಹೇಳದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಂಗ್ಯ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಸಚಿವರೊಬ್ಬರ ಹೆಸರು ಪಿಎಸ್ಐ ಅಕ್ರಮದಲ್ಲಿ ಕೇಳಿ ಬಂದಿದ್ದು, ಅವರ ಕುಟುಂಬಿಕರು, ಸಂಬಂಧಿಕರು ಕೂಡಾ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಬಂದಿದೆ. ಸಿಎಂ ಬೊಮ್ಮಾಯಿಯವರು ಆ ಸಚಿವರ ವಿರುದ್ದ ಕ್ರಮ ಕೈಗೊಳ್ಳಬೇಕು. ಆ ಸಚಿವರ ಬಗ್ಗೆ ಮಾತನಾಡಿದ್ದಕ್ಕೆ ನನಗೆ ಅನೇಕ ಕರೆಗಳು ಬರುತ್ತಿದ್ದು, ಅವರು ಸಿಎಂ ರೇಸ್ನಲ್ಲಿದ್ದು, ಅವರ ಬಗ್ಗೆ ಮಾತನಾಡಬೇಡಿ, ಈ ಬಾರಿ ಅವರೇ ಸಿಎಂ ಆಗಲಿದ್ದಾರೆ ಎನ್ನುತ್ತಿದ್ದಾರೆ ಎಂದು ಮಾರ್ಮಿಕವಾಗಿ ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಬಳಿಕ ನಡೆದ ಅಕ್ರಮ ಇದಲ್ಲ. ಹಾಗಾಗಿ ಅವರ ಮೇಲೆ ಆರೋಪ ಮಾಡುವುದಿಲ್ಲ. ಆದರೆ ಅವರ ಸಂಪುಟದಲ್ಲಿರುವ ಸಚಿವರೊಬ್ಬರ ಹೆಸರು ಕೇಳಿ ಬರುತ್ತಿರುವುದರಿಂದ ಅವರು ಎಷ್ಟೇ ಪ್ರಭಾವಿಯಾದರೂ ಪಾರದರ್ಶಕ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದ ಅವರು, ಸರ್ಕಾರ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಅಕ್ರಮದಲ್ಲಿ ಭಾಗಿಯಾದ ವ್ಯಕ್ತಿಯೋರ್ವನನ್ನು ಪ್ರಭಾವಿ ಸಚಿವರ ಕೃಪಾಕಟಾಕ್ಷದಿಂದ ಪೊಲೀಸರು ಬಿಟ್ಟಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಈ ಬಗ್ಗೆ ಸೂಕ್ತ ತನಿಖೆ ಮಾಡಬೇಕು. ಭ್ರಷ್ಟಾಚಾರ ಮತ್ತು ಕೆಮ್ಮು ಇವೆರಡು ಎಷ್ಟು ಬಚ್ಚಿಟ್ಟುಕೊಂಡರೂ ಹೊರಗೆ ಬಂದೇ ಬರುತ್ತದೆ ಎಂದು ಇದೇ ವೇಳೆ ಡಿ.ಕೆ. ಶಿವಕುಮಾರ್ ಹೇಳಿದರು.