ಬೆಂಗಳೂರು, ಮೇ 02 (DaijiworldNews/DB): ಐದು ದಿನ ಕಳೆದರೂ ಸುಂಕದಕಟ್ಟೆ ಆಸಿಡ್ ದಾಳಿ ಪ್ರಕರಣದ ಆರೋಪಿ ಪತ್ತೆಯಾಗದ ಹಿನ್ನೆಲೆಯಲ್ಲಿ 7 ತಂಡಗಳನ್ನು ರಚಿಸಿ ರಾಜ್ಯ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಪ್ರೀತಿಸಲು ನಿರಾಕರಿಸಿದ್ದಕ್ಕೆ ಏ. 28ರಂದು ಸುಂಕದಕಟ್ಟೆಯಲ್ಲಿರುವ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಯುವತಿ ಮೇಲೆ ಆಸಿಡ್ ಎರಚಿ ಆರೋಪಿ ನಾಗೇಶ್ ಪರಾರಿಯಾಗಿದ್ದ. ಈ ಹಿನ್ನೆಲೆಯಲ್ಲಿ ಆರೋಪಿ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಿ ಪೊಲೀಸರು ಹುಡುಕಾಡಿದ್ದರು. ಆದರೆ ಆತನ ಸುಳಿವು ಸಿಗದ ಹಿನ್ನೆಲೆಯಲ್ಲಿ ಐದು ತಂಡ ಮಾಡಲಾಗಿತ್ತು. ಇದೀಗ ಆತನ ಬಂಧನ ಮತ್ತಷ್ಟು ಜಟಿಲವಾದ ಕಾರಣ ಏಳು ತಂಡಗಳನ್ನು ರಚಿಸಿ ಪತ್ತೆಗೆ ಬಲೆ ಬೀಸಲಾಗಿದೆ. ಅಲ್ಲದೆ, ಪಶ್ಚಿಮ ವಿಭಾಗದ ಪೊಲೀಸರ ವಿಶೇಷ ತಂಡವೊಂದು ಹೊರ ರಾಜ್ಯಕ್ಕೂ ಹೋಗಿದೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಈಗಾಗಲೇ ಆರೋಪಿಯ ಸಹೋದರ ಮತ್ತು ಪೋಷಕರನ್ನು ಪೊಲೀಸರು ಬಂಧಿಸಿದ್ದು, ಇನ್ನೂ 20 ಮಂದಿ ಪೊಲೀಸ್ ವಶದಲ್ಲಿದ್ದಾರೆ.
ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಚೇತರಿಸಿಕೊಳ್ಳುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಆಕೆಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚರ್ಮ ಕಸಿಯನ್ನು ಸೋಮವಾರದಿಂದ ಆರಂಭಿಸಲಾಗುವುದು ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ. ಚರ್ಮ ಕಸಿ ಮಾಡಿದ ಬಳಿಕ ಆಕೆಯ ಚರ್ಮ ಮೊದಲಿನಂತೆ ಬೆಳೆಯುವ ನಿರೀಕ್ಷೆಯಿದೆ. ಇದಕ್ಕೆ ಸುಮಾರು ಮೂರು ವಾರ ತಗುಲಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಪ್ರೀತಿ ನಿರಾಕರಿಸಿದ ಕಾರಣಕ್ಕಾಗಿ ಸಿಟ್ಟುಗೊಂಡ ಆರೋಪಿ ಬೆಳಗ್ಗೆ ಕಚೇರಿಗೆ ಯುವತಿ ಆಗಮಿಸುವುದನ್ನೇ ಕಾಯುತ್ತಿದ್ದ ಆರೋಪಿ ಕಚೇರಿ ಬಾಗಿಲು ತೆರೆಯುತ್ತಿದ್ದಂತೆ ಆಕೆಯ ಮೇಲೆ ಆಸಿಡ್ ಎರಚಿದ್ದಾನೆ. ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದರೂ ಹಿಂಬಾಲಿಸಿ ಆಸಿಡ್ ಹಾಕಿ ಪರಾರಿಯಾಗಿದ್ದ.ಆಕೆಯ ದೇಹ ಶೇ. 45ರಷ್ಟು ಭಾಗ ಗಾಯಗೊಂಡಿತ್ತು.