ಬೆಂಗಳೂರು, ಮೇ 02 (DaijiworldNews/MS): ರಾಜಕೀಯ ಅಸ್ಥಿರತೆ ಮೂಡಿಸಲು ಟೂಲ್ ಕಿಟ್ ಮಾದರಿಯಲ್ಲಿ ತಂತ್ರ ಹೆಣೆದ ಕಾಂಗ್ರೆಸ್ಸಿಗರು ಈಗ ಅದರೊಳಗೆ ತಾವೇ ಬಿದ್ದು ಬೇಸಗೆಯಲ್ಲೂ ಗಡ ಗಡ ನಡುಗುತ್ತಿದ್ದಾರೆ ಎಂದು ಪಿಎಸ್ಐ ನೇಮಕ ಹಗರಣದ ವಿಚಾರವಾಗಿ ಭಾರತೀಯ ಜನತಾ ಪಕ್ಷ ಕಾಂಗ್ರೆಸ್ ವಿರುದ್ದ ವ್ಯಂಗ್ಯವಾಡಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿಯೂ, " ಪಿಎಸ್ಐ ನೇಮಕ ಹಗರಣದ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ವರ್ತನೆಯೇ ಅನುಮಾನ ಸೃಷ್ಟಿಸುತ್ತಿದೆ.ಸಿದ್ದರಾಮಯ್ಯ ಪರೀಕ್ಷೆ ರದ್ದುಪಡಿಸಿದ್ದು ಸರಿ ಎನ್ನುತ್ತಿದ್ದರೆ, ಭ್ರಷ್ಟಾಧ್ಯಕ್ಷ ಡಿಕೆಶಿ, ಪ್ರಿಯಾಂಕ್ ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರೇ, ನೀವೆಲ್ಲ ಒಂದೆಡೆ ಕೂತು ಮೊದಲು ಒಮ್ಮತದ ನಿರ್ಧಾರ ಕೈಗೊಳ್ಳಿ ಎಂದು ಲೇವಡಿ ಮಾಡಿದೆ.
ಪಿಎಸ್ಐ ನೇಮಕ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ, ತನಿಖೆಯ ವಿಚಾರದಲ್ಲಿ ಎಲ್ಲಿಯೂ ಎಡವಿಲ್ಲ. ವಿಳಂಬವೂ ಮಾಡಿಲ್ಲ.ಹಗರಣದ ಹಿನ್ನೆಲೆಯಲ್ಲಿ ನೇಮಕಾತಿ ರದ್ದು ಮಾಡಲಾಗಿದೆ, ಆರೋಪಿಗಳನ್ನು ಕಾನೂನು ವ್ಯಾಪ್ತಿಗೆ ಒಳಪಡಿಸಲಾಗುತ್ತಿದೆ. ಇಷ್ಟರ ಮೇಲೂ ಕಾಂಗ್ರೆಸ್ ಏಕೆ ಕಳವಳಗೊಳ್ಳುತ್ತಿದೆ?ದಿವ್ಯಾ ಹಾಗರಗಿ ಬಂಧನಕ್ಕೆ 18 ದಿನ ಏಕಾಯ್ತು ಎಂದು ಪ್ರಶ್ನಿಸುವ ಪ್ರಿಯಾಂಕ ಖರ್ಗೆಗೆ ತಮ್ಮದೇ ಪಕ್ಷದ ಮುಖಂಡರು ಅಕ್ರಮದಲ್ಲಿರುವುದು ಗೊತ್ತೇ ಆಗಿಲ್ಲವೇ?ಖರ್ಗೆಯವರೇ, 2 ಬಾರಿ ನೋಟಿಸ್ ನೀಡಿದರೂ ತಪ್ಪಿಸಿಕೊಂಡು ಓಡಾಡುತ್ತಿರುವ ನಿಮ್ಮ ಬಗ್ಗೆಯೂ ಜನ ಅನುಮಾನ ಪಡುತ್ತಿದ್ದಾರೆ, ಏನು ಹೇಳುತ್ತೀರಿ ಇದಕ್ಕೆ ಎಂದು ಪ್ರಶ್ನಿಸಿದೆ.
ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಹಾಗೂ ವರ್ತನೆ ನೋಡಿದರೆ ಈ ಹಗರಣದ ಬಗ್ಗೆ ಅಪಾರ ಜ್ಞಾನ ಹಾಗೂ ಸಂಬಂಧ ಹೊಂದಿರುವಂತೆ ಕಾಣುತ್ತಿದೆ.ಪ್ರಿಯಾಂಕ್ ಅವರೇ, ಸಿಐಡಿ ನೋಟಿಸ್ಗೆ ನೇರವಾಗಿ ಉತ್ತರಿಸಲು ಅಳುಕೇಕೆ? ಹಗರಣದಲ್ಲಿ ನಿಮ್ಮ "ಪಾಲು" ಹಾಗೂ ಭಾಗ ಏನೆಂಬುದು ಬಯಲಾಗಬಹುದೆಂಬ ಭಯ ನಿಮ್ಮನ್ನು ಕಾಡುತ್ತಿದೆಯೇ? ಆರೋಪಿ ದಿವ್ಯಾ ಹಾಗರಗಿ ತನಿಖಾಧಿಕಾರಿಗಳಿಗೆ ನೀಡಿರುವ ಹೇಳಿಕೆ ಪ್ರಕಾರ ರುದ್ರೇಗೌಡ ಪಾಟೀಲ್ ಸಹೋದರರಿಂದ ಹಣ ಪಡೆಯಲಾಗಿದೆ. ಹಾಗಾದರೆ ಹಗರಣದ ಹಿಂದಿರುವ ಶಕ್ತಿಗಳು ಕಾಂಗ್ರೆಸ್ ನಾಯಕರಲ್ಲವೇ? ಕ್ವೀನ್ಸ್ ರಸ್ತೆಯಲ್ಲಿರುವ ಭ್ರಷ್ಟಾಧ್ಯಕ್ಷ ರ ಅಕ್ರಮ ಹಣದ ಬ್ಯಾಂಕ್ಗೆ ಈ ಹಗರಣದ ಹಣ ತಲುಪಿರಬಹುದೇ? ಎಂದು ಬಿಜೆಪಿ ಸಂಶಯಿಸಿದೆ.
ನೇಮಕಾತಿ ಹಗರಣದ ನಂಟು ಕಾಂಗ್ರೆಸ್ ಜೊತೆ ಅಕ್ಷಯವಾಗುತ್ತಿದೆ.ಹಗರಣದ ಮೂಲ ಕೆಪಿಸಿಸಿಯ ಭ್ರಷ್ಟಾಧ್ಯಕ್ಷ & ಖರ್ಗೆ ಕುಟುಂಬದ ಸುತ್ತ ತಿರುಗುತ್ತಿದೆ.ರಾಜಕೀಯ ಅಸ್ಥಿರತೆ ಮೂಡಿಸಲು ಟೂಲ್ ಕಿಟ್ ಮಾದರಿಯಲ್ಲಿ ತಂತ್ರ ಹೆಣೆದ ಕಾಂಗ್ರೆಸ್ಸಿಗರು ಈಗ ಅದರೊಳಗೆ ತಾವೇ ಬಿದ್ದು ಬೇಸಗೆಯಲ್ಲೂ ಗಡ ಗಡ ನಡುಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.