ನವದೆಹಲಿ, ಮೇ 02 (DaijiworldNews/DB): ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಯೂರೋಪ್ ಪ್ರವಾಸ ಹಮ್ಮಿಕೊಂಡಿದ್ದು, ಸೋಮವಾರ ಬರ್ಲಿನ್ಗೆ ಭೇಟಿ ನೀಡಲಿದ್ದಾರೆ.
ಜರ್ಮನಿಯ ಫೆಡರಲ್ ಚಾನ್ಸೆಲರ್ ಎಚ್. ಇ. ಓಲಾಫ್ ಸ್ಕೋಲ್ಜ್ ಅವರೊಂದಿಗೆ ಇದೇ ವೇಳೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಉಭಯ ದೇಶಗಳಿಗೆ ಸಂಬಂಧಿಸಿದ ಕಾರ್ಯತಂತ್ರ, ಪ್ರಾದೇಶಿಕ ಮತ್ತು ಜಾಗತಿಕ ಅಭ್ಯುದಯಗಳ ಬಗ್ಗೆ ಅಲ್ಲಿನ ಚಾನ್ಸೆಲರ್ ಜೊತೆ ಮಾತುಕತೆ ನಡೆಸಲು ಈ ಭೇಟಿ ಮಹತ್ವದ್ದಾಗಿದೆ. ಅಲ್ಲದೆ ಉಭಯ ದೇಶಗಳಲ್ಲಿ ಕೋವಿಡ್ ನಂತರದ ಆರ್ಥಿಕತೆ ಬಲವರ್ಧನೆಗೆ ಕೈಗಾರಿಕೆಗಳ ಅಭ್ಯುದಯ ಮಾತನಾಡಲಿದ್ದಾರೆ.
ಬಳಿಕ ಡೆನ್ಮಾರ್ಕ್ನ ಕೋಪನ್ಹೇಗನ್ಗೆ ತೆರಳಿ ಅಲ್ಲಿನ ಪ್ರಧಾನಿ ಫ್ರೆಡೆರಿಕ್ಸೆನ್ ಅವರೊಂದಿಗೆ ದ್ವಿಪಕ್ಷೀಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಡೆನ್ಮಾರ್ಕ್ ಮತ್ತು ಭಾರತದ ಮಹತ್ವದ 'ಹಸಿರು ಕಾರ್ಯತಂತ್ರದ ಪಾಲುದಾರಿಕೆ' ಮತ್ತುಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಗಳ ಕುರಿತು ಇಲ್ಲಿ ಚರ್ಚೆಯಾಗಲಿದೆ. ಡೆನ್ಮಾರ್ಕ್, ಐಸ್ಲ್ಯಾಂಡ್, ಫಿನ್ಲ್ಯಾಂಡ್, ಸ್ವೀಡನ್ ಮತ್ತು ನಾರ್ವೆಯ ಪ್ರಧಾನ ಮಂತ್ರಿಗಳೊಂದಿಗೆ ಎರಡನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಕೂಡಾ ಅವರು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, ಭಾರತಕ್ಕೆ ವಾಪಸ್ಸಾಗುವ ಸಂದರ್ಭದಲ್ಲಿ ಪ್ಯಾರಿಸ್ಗೆ ತೆರಳಿ ಅಲ್ಲಿನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಪಿಎಂಒ ಕಚೇರಿ ಹೇಳಿಕೆ ತಿಳಿಸಿದೆ.