ನವದೆಹಲಿ, ಮೇ 01 (DaijiworldNews/DB): ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ನಿಂದ ಜೂನ್ ಮಧ್ಯ ಭಾಗದವರೆಗೆ ನಡೆಯುವ 10 ಮತ್ತು 12 ನೇ ತರಗತಿ ಎರಡನೇ ಅವಧಿಯ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಮೂರನೇ ಅವಕಾಶ ಇಲ್ಲ ಎಂದು ಸಿಬಿಎಸ್ಇ ಮಂಡಳಿ ಸೂಚಿಸಿದೆ.
ಕೋವಿಡ್ -19 ಸಾಂಕ್ರಾಮಿಕ ಅವಧಿಯಲ್ಲಿ ಸಿಬಿಎಸ್ಇ ಎರಡು ಅವಧಿಯ ಪರೀಕ್ಷಾ ವ್ಯವಸ್ಥೆಯನ್ನು ಪರಿಚಯಿಸಿತು. ಎರಡನೇ ಅವಧಿ ಪರೀಕ್ಷೆಗೆ ದೇಶಾದ್ಯಂತ ಸುಮಾರು 35 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಮೊದಲ ಅವಧಿಯಲ್ಲಿ ಹಾಜರಾಗದವರಿಗೆ ಪ್ರಸ್ತುತ ಎರಡನೇ ಅವಧಿಗೆ ಹಾಜರಾಗಲು ಅವಕಾಶವಿದೆ. ಆದರೆ ಇದಕ್ಕೂ ಗೈರಾದರೆ ಮುಂದೆ ಮೂರನೇ ಅವಕಾಶ ನೀಡುವುದಿಲ್ಲ. ಒಂದು ವೇಳೆ ಗೈರಾದರೆ ಅಂತಹ ವಿದ್ಯಾರ್ಥಿಗಳು ಮತ್ತೆ ಅದೇ ತರಗತಿಯಲ್ಲಿ ಪುನರಾವರ್ತನೆಯಾಗಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಪರೀಕ್ಷೆಗೆ ಕುಳಿತುಕೊಳ್ಳಬೇಕು ಎಂದು ತಿಳಿಸಿದೆ.
ಜೂನ್ನಲ್ಲಿ ಕೋವಿಡ್ ಅಪ್ಪಳಿಸಬಹುದಾದ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರಾದರೂ, ಸದ್ಯ ಯಾವುದೇ ಸಮಸ್ಯೆ ಇಲ್ಲ. ಪರೀಕ್ಷೆಗಳು ಸುಸೂತ್ರವಾಗಿ ನಡೆಯುತ್ತಿವೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.