ಲಖನೌ, ಮೇ 01 (DaijiworldNews/DB): ಕೆಲಸಕ್ಕೆ ಹಾಜರಾದ ಮರುದಿನವೇ ನೇಣು ಬಿಗಿದ ಸ್ಥಿತಿಯಲ್ಲಿ ನರ್ಸ್ ಶವ ಪತ್ತೆಯಾದ ಘಟನೆ ಉತ್ತರ ಪ್ರದೇಶದ ಉನ್ನಾವ್ನಲ್ಲಿ ನಡೆದಿದೆ. ಮನೆಯವರು ಇದೊಂದು ಅತ್ಯಾಚಾರವೆಸಗಿ ಕೊಲೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ಕಳೆದ ಐದು ದಿನಗಳ ಹಿಂದಷ್ಟೇ ಪ್ರಾರಂಭವಾದ ಖಾಸಗಿ ಆಸ್ಪತ್ರೆಯೊಂದಕ್ಕೆ ನರ್ಸ್ ಆಗಿ ಮಹಿಳೆಯೊಬ್ಬರು ಶುಕ್ರವಾರ ಸೇರಿದ್ದರು. ಆದರೆ ಶನಿವಾರ ಅದೇ ಆಸ್ಪತ್ರೆ ಕಟ್ಟಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ಮನೆಯವರು ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅತ್ಯಾಚಾರ ಎಸಗಿರುವುದು ದೃಢಪಟ್ಟಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಮೂವರ ವಿರುದ್ದ ಸದ್ಯ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಕೊಲೆಯೇ ಆದಲ್ಲಿ ಆರೋಪಿತರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಶಶಿ ಶೇಖರ್ ಸಿಂಗ್ ತಿಳಿಸಿದ್ದಾರೆ.