ನವದೆಹಲಿ, ಮೇ 01 (DaijiworldNews/HR): ಭವಿಷ್ಯದ ಭದ್ರತಾ ಸವಾಲುಗಳನ್ನು ಎದುರಿಸಲು ಕಾರ್ಯಾಚರಣೆ ಸನ್ನದ್ಧತೆಯ ಉನ್ನತ ಗುಣಮಟ್ಟವನ್ನು ಎಲ್ಲಾ ಕ್ಷೇತ್ರಗಳಲ್ಲೂ ಖಚಿತಪಡಿಸಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ ಎಂದು ಹೊಸದಾಗಿ ನೇಮಕಗೊಂಡ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಹೇಳಿದ್ದಾರೆ.
ಜನರಲ್ ಮನೋಜ್ ಪಾಂಡೆ ಸೇನೆಯ 29 ನೇ ಮುಖ್ಯಸ್ಥರಾಗಿ ಶನಿವಾರ ಅಧಿಕಾರ ವಹಿಸಿಕೊಂಡಿದ್ದು, ವಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೇಗವಾಗಿ ಬದಲಾಗುತ್ತಿರುವ ಜಾಗತಿಕ, ಭೌಗೋಳಿಕ ಮತ್ತು ರಾಜಕೀಯ ಪರಿಸ್ಥಿತಿಯಿಂದಾಗಿ ಭವಿಷ್ಯದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಿದ್ದು, ಯುದ್ಧ ಕಾಲದ ಸವಾಲುಗಳನ್ನು ಎದುರಿಸಲು ಕಾರ್ಯಾಚರಣೆಯ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವುದು ತಮ್ಮ ಮೊದಲ ಆದ್ಯತೆ ಎಂದರು.
ಇನ್ನು ಕಾರ್ಯಾಚರಣೆ ಮತ್ತು ಕ್ರಿಯಾತ್ಮಕ ದಕ್ಷತೆಯನ್ನು ಹೆಚ್ಚಿಸಲು ಸೇನೆಯಲ್ಲಿ ನಡೆಯುತ್ತಿರುವ ಸುಧಾರಣೆಗಳು, ಪುನರ್ರಚನೆ ಮತ್ತು ರೂಪಾಂತರದ ಮೇಲೆ ತಮ್ಮ ಗಮನ ಕೇಂದ್ರೀಕರಿಸಲಾಗುವುದು ಎಂದು ಹೇಳಿದ್ದಾರೆ.