ಮೈಸೂರು, ಮೇ 01 (DaijiworldNews/DB): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರೆಸ್ಸೆಸ್ ಮೂಲದವರಲ್ಲದ ಕಾರಣ ಅವರನ್ನು ಬದಲಾಯಿಸಲು ಮುಂದಾಗಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಗೆ ಮಾತನಾಡಿದ ಅವರು, ಜನತಾ ಪರಿವಾರದಲ್ಲಿ ನಮ್ಮ ಜೊತೆಯಲ್ಲೇ ಇದ್ದ ಬೊಮ್ಮಾಯಿ ನಮ್ಮ ಪಟ್ಟುಗಳನ್ನು ಕಲಿಯಲಿಲ್ಲ. ಆರೆಸ್ಸೆಸ್ ಮೂಲದವರು ಅವರಲ್ಲ. ಹೀಗಾಗಿ ಅವರ ಬದಲಾವಣೆ ಮಾಡಲು ಹೊರಟಿದ್ದಾರೆ. ರಾಜ್ಯ ಸರ್ಕಾರ ಸಶಕ್ತ ಆಡಳಿತಕ್ಕೆ ಸಂಪೂರ್ಣ ವಿಫಲವಾಗಿದ್ದು, ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಅಸಮರ್ಥರಾಗಿದ್ದಾರೆ ಎಂದರು.
ಸರ್ಕಾರದಲ್ಲಿರುವವರಿಗೆ ಆಡಳಿತ ಮಾಡುವುದೇ ಗೊತ್ತಿಲ್ಲ. ಪರೀಕ್ಷೆಗಳಲ್ಲಿ ದುಡ್ಡು ತಿನ್ನುವುದು ಮಾತ್ರ ಗೊತ್ತಿದೆ. ಆದರೆ ಹಣ ನೀಡಿ ಅಧಿಕಾರ ಪಡೆದವರು ಸರ್ಕಾರದ ಮಾತು ಕೇಳುತ್ತಿಲ್ಲ ಎಂದವರು ಆಪಾದಿಸಿದರು.
ಕಲ್ಲಿದ್ದಲು ಕೊರತೆ ರಾಜ್ಯದಲ್ಲಿ ಉಂಟಾಗಿಲ್ಲ. ಆದರೆ ಇರುವ ಕಲ್ಲಿದ್ದಲನ್ನು ನಿರ್ವಹಣೆ ಮಾಡುವ ಕಲೆ ಇವರಿಗೆ ಗೊತ್ತಿಲ್ಲ. ಇದೊಂದು ಭ್ರಷ್ಟ ಸರ್ಕಾರವಾಗಿದ್ದು, ಕರ್ನಾಟಕದಲ್ಲಿ ಇಂತಹ ಸರ್ಕಾರ ಈ ಹಿಂದೆ ಇರಲಿಲ್ಲ ಎಂದವರು ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಮತ್ತು ಅವರ ಮಕ್ಕಳು ಅಪ್ಪ ಮಕ್ಕಳಲ್ಲವೇ ಎಂದು ಕಾಂಗ್ರೆಸ್ ವಂಶ ಪಾರಂಪರ್ಯ ರಾಜಕಾರಣ ಮಾಡುತ್ತಿದೆ ಎಂದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ತಿಳಿಸಬೇಕು ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.