ಬೆಂಗಳೂರು, ಮೇ 01 (DaijiworldNews/DB): ಪಕ್ಷಾಂತರ ಮಾಡಿರುವುದು ನನ್ನ ರಾಜಕೀಯ ಜೀವನದಲ್ಲಿ ನಾನು ಮಾಡಿದ ಮೊದಲ ತಪ್ಪು ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ಹೇಳಿದ್ದಾರೆ.
ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಒಂದು ಪಕ್ಷವನ್ನು ತೊರೆದು ಇನ್ನೊಂದು ಪಕ್ಷ ಸೇರಿರುವುದು ನಾನು ಮಾಡಿದ ತಪ್ಪು. ನನ್ನನ್ನು ಪಕ್ಷ ತೊರೆಯುವಂತೆ ಮಾಡಿರುವುದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು. ಪ್ರಸ್ತುತ ಈ ತಪ್ಪಿನ ಅರಿವು ನನಗೆ ಆಗುತ್ತಿದೆ. ರಾಜಕೀಯದಲ್ಲಿ ಹಣ ಸಂಪಾದನೆಗಾಗಿ ಬಂದಿಲ್ಲ. ಪಾರದರ್ಶಕವಾಗಿಯೇ ನನ್ನ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ ಎಂದರು.
ಬಸವರಾಜ ಬೊಮ್ಮಾಯಿ ಸಂಪುಟದ ಕೆಲವು 'ವಲಸಿಗ ಸಚಿವರು' ಬಿಜೆಪಿ ತೊರೆಯಲು ಯೋಜಿಸುತ್ತಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ಸಚಿವ ಎಂಟಿಬಿ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ವಸತಿ ಸಚಿವರಾಗಿದ್ದ ಎಂಟಿಬಿ 2019 ರಲ್ಲಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರ್ಪಡೆಗೊಂಡರು. ಬಿಜೆಪಿಯಿಂದ ಸ್ಪರ್ಧೆ ನಡೆಸಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ವಿರುದ್ಧ ಸೋಲುಂಡಿದ್ದರು. ಆದರೂ 2020ರಲ್ಲಿ ವಿಧಾನ ಪರಿಷತ್ಗೆ ಆಯ್ಕೆಯಾಗಿ ಬಳಿಕ ಸಂಪುಟಕ್ಕೆ ಸೇರ್ಪಡೆಯಾದರು.