ಲಕ್ನೋ, ಮೇ 01 (DaijiworldNews/DB): ಕಾಂಗ್ರೆಸ್ ಪಕ್ಷ ಬಲವರ್ಧನೆ ಮತ್ತು ಮರಳಿ ಅಧಿಕಾರ ಪಡೆಯುವ ಸಲುವಾಗಿ ಪಕ್ಷವು ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿದೆ. ಇದೀಗ ಉತ್ತರ ಪ್ರದೇಶದಲ್ಲಿ ಹೇಗಾದರೂ ಮಾಡಿ ಕಾಂಗ್ರೆಸ್ನ್ನು ಮೇಲಕೆತ್ತಬೇಕು ಎಂದು ಪಣತೊಟ್ಟಿರುವ ಸೋನಿಯಾ ಗಾಂಧಿ ಅವರಿಗೆ ಆ ರಾಜ್ಯದ ಉಸ್ತುವಾರಿ ಹೊತ್ತಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಮೂರು ಸಲಹೆಗಳನ್ನು ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸಮಿತಿಯನ್ನು ಪುನಾರಚನೆ ಮಾಡಿ ಸಮಿತಿಗೆ ಹಿರಿಯ ನಾಯಕರೊಬ್ಬರನ್ನು ಉಸ್ತುವಾರಿಯನ್ನಾಗಿ ನೇಮಿಸಬೇಕು, ನಾಲ್ಕರಿಂದ ಐದು ಮಂದಿ ಕಾರ್ಯಾಧ್ಯಕ್ಷರನ್ನು ನೇಮಿಸಿ ಸಂಘಟನೆ ಬಲವರ್ಧನೆಗೆ ನಿಗಾ ಇಡುವುದು ಮತ್ತು ಈ ಕಾರ್ಯಾಧ್ಯಕ್ಷರ ಮೇಲ್ವಿಚಾರಣೆಗೆ ರಾಜ್ಯಾಧ್ಯಕ್ಷರನ್ನು ನೇಮಿಸುವುದು ಹಾಗೂ ಉತ್ತರಪ್ರದೇಶವನ್ನು ಪಶ್ಚಿಮ, ಪೂರ್ವ, ಅವಧ್, ಎಂಬ ವಲಯಗಳನ್ನಾಗಿ ವಿಭಾಗಿಸಿ ಅಲ್ಲಿ ಪ್ರತ್ಯೇಕ ಸಮಿತಿಗಳನ್ನು ಅಸ್ತಿತ್ವಕ್ಕೆ ತರುವುದು.
ಈ ಮೂರು ಸಲಹೆಗಳನ್ನು ಪ್ರಿಯಾಂಕಾ ವಾಧ್ರಾ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಮುಂದಿಟ್ಟಿದ್ದಾರೆ. ಸಲಹೆಗಳನ್ನು ಸೋನಿಯಾ ಗಾಂಧಿಯವರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.