ನವದೆಹಲಿ, ಏ 30 (DaijiworldNews/MS): ವಿವಿಧ ರಾಜ್ಯಗಳಲ್ಲಿ ಉಂಟಾಗುತ್ತಿರುವ ವಿದ್ಯುತ್ ಬಿಕ್ಕಟ್ಟಿನ ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, " ವಿದ್ಯುತ್ ಬಿಕ್ಕಟ್ಟು ಉಂಟಾಗಿರುವ ನಿಮ್ಮ ವೈಫಲ್ಯಕ್ಕೆ ನೀವು ಯಾರನ್ನು ದೂಷಿಸುವಿರಿ? ನೆಹರೂ ಅಥವಾ ರಾಜ್ಯಗಳೇ ಅಥವಾ ಜನರೇ? ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ದ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ಪ್ರಧಾನಿ ಮೋದಿ ಅವರನ್ನು ತರಾಟೆಗೆತ್ತಿಕೊಂಡಿದ್ದು, ವಿದ್ಯುತ್ ಬಿಕ್ಕಟ್ಟಿನ ಪ್ರಸ್ತುತ "ವೈಫಲ್ಯ" ಕ್ಕೆ ಯಾರನ್ನು ದೂಷಿಸಬೇಕು ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿಯವರ ಭರವಸೆಗಳು ಮತ್ತು ಉದ್ದೇಶಗಳೊಂದಿಗೆ ನಾವು ಸಂಪರ್ಕ ಸಾಧಿಸಲು ಸಾಧ್ಯವಿಲ್ಲ. ಮೋದಿಯವರೇ, ಈ ವಿದ್ಯುತ್ ಬಿಕ್ಕಟ್ಟಿಗೆ ನಿಮ್ಮ ವೈಫಲ್ಯವೇ ಕಾರಣ. ಈಗ ನೀವು ಯಾರನ್ನು ದೂಷಿಸುವಿರಿ? ನೆಹರೂ ಅವರನ್ನೇ ಅಥವಾ ರಾಜ್ಯಗಳನ್ನೇ ಅಥವಾ ಜನರನ್ನೇ?’
ಪ್ರಧಾನಿ ಮೋದಿ ಈ ಹಿಂದೆ ಮಾಡಿರುವ ಭಾಷಣದ ವಿಡಿಯೊ ತುಣುಕನ್ನು ರಾಹುಲ್ ತಮ್ಮ ಟ್ವೀಟ್ ಜೊತೆಗೆ ಹಂಚಿಕೊಂಡಿದ್ದಾರೆ. 24 ಗಂಟೆಗಳ ಕಾಲ ವಿದ್ಯುತ್ ನೀಡುವುದಾಗಿ ಪ್ರಧಾನಿ ಮೋದಿ ಈ ವಿಡಿಯೊದಲ್ಲಿ ಭರವಸೆ ನೀಡಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳು ಕಳೆದ ಆರು ವರ್ಷಗಳಲ್ಲೇ ಅತ್ಯಂತ ಭೀಕರವಾದ ವಿದ್ಯುತ್ ಬಿಕ್ಕಟ್ಟನ್ನು ಎದುರಿಸುತ್ತಿವೆ.
ವಿದ್ಯುತ್ ಬೇಡಿಕೆಯ ಹೆಚ್ಚಳವು ದೇಶದಲ್ಲಿ ವಿದ್ಯುತ್ ಉತ್ಪಾದಿಸಲು ಬಳಸುವ ಪ್ರಬಲ ಇಂಧನವಾದ ಕಲ್ಲಿದ್ದಲ ಕೊರತೆ ದೇಶವನ್ನು ಪರದಾಡುವಂತೆ ಮಾಡಿದೆ.ಕಲ್ಲಿದ್ದಲು ಪೂರೈಕೆ ಸುಧಾರಿಸದಿದ್ದರೆ ಮುಂದಿನ ತಿಂಗಳು ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ವಿದ್ಯುತ್ ವಿತರಣಾ ಕಂಪನಿ ಅನುಮಾನ ವ್ಯಕ್ತಪಡಿಸಿದೆ.