ಬೆಂಗಳೂರು, ಏ 30 (DaijiworldNews/MS): ಪಿಎಸ್ಐ ನೇಮಕ ಹಗರಣದ ಕಿಂಗ್ ಪಿನ್ ಆರೋಪಿ ದಿವ್ಯಾ ಮತ್ತು ಡಿ.ಕೆ. ಶಿವಕುಮಾರ್ ಪರಿಚಿತರು ಎಂಬ ವಿಚಾರವಾಗಿ ರಾಜ್ಯ ಬಿಜೆಪಿ ಮತ್ತೊಮ್ಮೆ ಕಿಡಿಕಾರಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಪಿಎಸ್ಐ ನೇಮಕ ಹಗರಣದ ಆರೋಪಿ ದಿವ್ಯಾ ನಿವಾಸಕ್ಕೆ ಡಿ.ಕೆ. ಶಿವಕುಮಾರ್ ಬಂದಿದ್ದರು ಎಂಬುದಕ್ಕೆ ಫೋಟೋ ಸಾಕ್ಷಿ ಇದೆ. ಆರೋಪಿಯು ಪರಿಚಿತರು ಎಂದು ಡಿಕೆಶಿ ಒಪ್ಪಿಕೊಂಡಿದ್ದಾರೆ. ಇತರ ಆರೋಪಿಗಳಾದ ರುದ್ರಗೌಡ ಪಾಟೀಲ್, ಶಿವಾನಂದ ಪಾಟೀಲ್ ಕಾಂಗ್ರೆಸ್ ಪದಾಧಿಕಾರಿಗಳಾಗಿದ್ದಾರೆ. ಹಾಗಾದರೆ ಈ ಹಗರಣದಲ್ಲಿ ಡಿಕೆಶಿ ಪಾಲೆಷ್ಟು? ಎಂದು ಪ್ರಶ್ನಿಸಿದೆ.
ಪ್ರಿಯಾಂಕ್ ಖರ್ಗೆ ಅವರಿಗೆ ನೊಟೀಸ್ ನೀಡಿದ್ದು ತಪ್ಪು ಎನ್ನುವ ಕಾಂಗ್ರೆಸ್ಸಿಗರೇ, ಪ್ರೆಸ್ ಮೀಟ್ ಮಾಡಿ ಪುರಾವೆಯಿಲ್ಲದೆ ಬಾಯಿಗೆ ಬಂದಂತೆ ಮಾತನಾಡುವುದು ತಪ್ಪಲ್ಲವೇ? ಪುರಾವೆ ಇದ್ದಿದ್ದರೆ ತನಿಖಾಧಿಕಾರಿಗಳಿಗೆ ನೀಡದೆ ಇರುವುದು ತಪ್ಪಲ್ಲವೇ? ವಿಚಾರಣೆಗೆ ಗೈರು ಹಾಜರಾಗಿದ್ದು ತಪ್ಪಲ್ಲವೇ? ಎಂದು ಪ್ರಶ್ನೆಗಳನ್ನು ಕೇಳಿದೆ.