ಛತ್ತರ್ ಪುರ, ಏ 30 (DaijiworldNews/DB): ಲೈಂಗಿಕ ಕಿರುಕುಳಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಕೋಪಗೊಂಡ ವ್ಯಕ್ತಿಯೋರ್ವ ಚಲಿಸುತ್ತಿರುವ ರೈಲಿನಿಂದಲೇ ಯುವತಿಯನ್ನು ತಳ್ಳಿರುವ ಘಟನೆ ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯ ಖಜುರಾಹೊ ಬಳಿ ನಡೆದಿದೆ. ಸದ್ಯ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಯುವತಿಯು ಉತ್ತರ ಪ್ರದೇಶದ ಬಂದಾ ಜಿಲ್ಲೆಯ ನಿವಾಸಿಯಾಗಿದ್ದು, ಬಾಗೇಶ್ವರ್ ಧಾಮ್ ದೇವಸ್ಥಾನಕ್ಕೆ ಭೇಟಿ ನೀಡಿ ರೈಲಿನಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಸಹಪ್ರಯಾಣಿಕನೋರ್ವ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಯುವತಿ ಇದನ್ನು ವಿರೋಧಿಸಿದ್ದಕ್ಕೆ ಸಿಟ್ಟುಗೊಂಡ ಆತ ಆಕೆಯನ್ನು ಚಲಿಸುತ್ತಿರುವ ರೈಲಿನಿಂದ ತಳ್ಳಿದ್ದಾನೆ. ಸದ್ಯ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಛತ್ತರ್ ಪುರದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಧ್ಯಪ್ರದೇಶದ ಖಜುರಾಹೊ ಮತ್ತು ಉತ್ತರ ಪ್ರದೇಶದ ಮಹೋಬಾ ನಿಲ್ದಾಣಗಳ ನಡುವಿನ ಪ್ಯಾಸೆಂಜರ್ ರೈಲಿನಲ್ಲಿ ಏಪ್ರಿಲ್ 27 ರಂದು ರಾತ್ರಿ ಘಟನೆ ಸಂಭವಿಸಿದೆ ಎಂದು ಜಬಲ್ಪುರದ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಯ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ವರ್ಮಾ ತಿಳಿಸಿದ್ದಾರೆ.
ಆತ ನನಗೆ ಲೈಂಗಿಕ ಕಿರುಕುಳ ನೀಡಲೆತ್ನಿಸಿದಾಗ ನಾನು ವಿರೋಧಿಸಿ ದೂರವಿರಲು ಹೇಳಿದೆ. ವಿರೋಧಿಸುವಾಗ ಆತನ ಕೈಗೆ ಕಚ್ಚಿದೆ. ರಾಜನಗರ ಬಳಿ ಆತ ರೈಲು ಚಲಿಸುತ್ತಿರುವಾಗಲೇ ನನ್ನನ್ನು ಕೆಳಕ್ಕೆ ತಳ್ಳಿದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.