ಮುಂಬೈ, ಏ 30 (DaijiworldNews/DB): ಹನುಮಾನ್ ಚಾಲೀಸಾ ಹೆಸರಿನಲ್ಲಿ ಗಲಭೆ ಸೃಷ್ಟಿಸಿ ದೇಶ ವಿಭಜನೆಗೆ ಮುಂದಾಗುವವರ ವಿರುದ್ದ ಶಿವಸೇನೆ ಹೋರಾಟ ನಿರಂತರ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು, 'ಹನುಮಾನ್ ಚಾಲೀಸಾ ಪಠಿಸಿದವರನ್ನು ಬಂಧಿಸುವ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಕ್ರಮ ಸರಿಯಲ್ಲ. ಇದರಿಂದ ದಿ. ಬಾಳಾ ಠಾಕ್ರೆ ಅವರ ಆತ್ಮಕ್ಕೆ ಘಾಸಿಯಾಗುತ್ತದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ರಾವುತ್ ಈ ಹೇಳಿಕೆ ನೀಡಿದ್ದಾರೆ.
ದೇಶದಲ್ಲಿ ಚಾಲೀಸ ಹೆಸರಿನಲ್ಲಿ ಗಲಭೆ ಉಂಟು ಮಾಡುವುದು ಸಲ್ಲ. ಅಂತಹವರ ವಿರುದ್ದ ಹೋರಾಡಿದರೆ ಪಕ್ಷದ ಸಂಸ್ಥಾಪಕ ದಿ. ಬಾಳಾಸಾಹೇಬ್ ಠಾಕ್ರೆ ಅವರೂ ಖುಷಿ ಪಡುತ್ತಾರೆ ಎಂದರು.
ಚೌಬೆ ಅವರು ಬಾಳಾ ಸಾಹೇಬ್ ಠಾಕ್ರೆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಮ್ಮ ಹೋರಾಟಕ್ಕೆ ಅವರು ಶಕ್ತಿ ನೀಡುತ್ತಾರೆ. ಹನುಮಾನ್ ದಲಿತ, ಅರಣ್ಯವಾಸಿ ಎಂದು ಈ ಹಿಂದೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದರು. ಇಂತಹವರು ಈಗ ನಮಗೆ ಹನುಮಾನ್ ಚಾಲೀಸ ಬಗ್ಗೆ ಪಾಠ ಮಾಡುತ್ತಿದ್ದಾರೆ. ಮಹಾರಾಷ್ಟ್ರವು ಹನುಮಂತ ಮತ್ತು ರಾಮನನ್ನು ಪೂಜಿಸುತ್ತದೆ ಎಂದವರು ತಿರುಗೇಟು ನೀಡಿದರು.
ಸಮಾಜ ವಿರೋಧಿ ಸಂಘಟನೆಗಳ ಮೇಲೆ ನಾವು ಸದಾ ಕಣ್ಣಿಟ್ಟಿದ್ದೇವೆ. ಆದರೆ ನಮ್ಮ ತಲೆ ಮೇಲೆ ನೀರು ಹರಿಯಲಾರಂಭಿಸಿದರೆ ಇತರರನ್ನು ನಾವು ಆ ನೀರಿನಲ್ಲಿ ಮುಳುಗಿಸಬೇಕಾಗಿ ಬರಬಹುದು ಎಂದು ಇದೇ ವೇಳೆ ಅವರು ಎಚ್ಚರಿಸಿದರು.