ಬೆಂಗಳೂರು, ಏ 30 (DaijiworldNews/HR): ಬಿಜೆಪಿಯು ಸಾಲು ಸಾಲು ನಾಯಕರು ಪಿಎಸ್ಐ ನೇಮಕಾತಿ ಹಗರಣದಲ್ಲಿ ಭಾಗಿಯಾಗಿದ್ದು, ಅವರನ್ನು ರಕ್ಷಿಸುವ ಸಲುವಾಗಿ ತನಿಖಾ ವರದಿಗೂ ಮೊದಲೇ ಪರೀಕ್ಷೆಯನ್ನು ರದ್ದು ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರನ್ನು ಮಹಾರಾಷ್ಟ್ರದಲ್ಲಿ ಬಂಧಿಸಿ ಕರೆತಂದಿದ್ದು, ಆರೋಪಿ ಹಾದಿ ಮಧ್ಯೆ ಇರುವಾಗಲೇ ಪರೀಕ್ಷೆ ರದ್ದುಗೊಳಿಸುವ ಆತುರದ ನಿರ್ಧಾರವನ್ನು ಗೃಹ ಸಚಿವರು ಘೋಷಿಸಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಇನ್ನು ಈ ಮೊದಲು ಆರೋಪಿಯನ್ನು 18 ದಿನಗಳ ಕಾಲ ಬಿಜೆಪಿಯವರೇ ಮುಚ್ಚಿಟ್ಟಿದ್ದರು ಎಂಬ ಆರೋಪಗಳಿದ್ದವು. ಗೃಹ ಸಚಿವರೂ ಸೇರಿದಂತೆ ಹಲವಾರು ಸಚಿವರ ಜತೆ ಆರೋಪಿ ಫೋಟೋ ತೆಗೆಸಿಕೊಂಡಿದ್ದಾರೆ. ಹಗರಣದ ಕುರಿತು ತನಿಖೆ ನಡೆಯುತ್ತಿದೆ. ಆರೋಪಿಗಳು ಇನ್ನೂ ಪೊಲೀಸ್ ವಶದಲ್ಲೇ ಇದ್ದಾರೆ. ಸಿಐಡಿಯ ಯಾವುದೇ ವರದಿ ಸಲ್ಲಿಕೆಯಾಗಿಲ್ಲ. ಆದರೂ ಸಚಿವರು ಏಕಾಏಕಿ ಪರೀಕ್ಷೆ ರದ್ದು ಮಾಡಿರುವುದು ಅನುಮಾನ ಮೂಡಿಸಿದೆ ಎಂದು ಹೇಳಿದ್ದಾರೆ.