ಗುವಾಹಟಿ, ಏ 30 (DaijiworldNews/DB): ನನ್ನನ್ನು ಬಂಧಿಸುವ ಮೂಲಕ ಬಿಜೆಪಿ ನಾಯಕರು ನನಗೆ ಕಿರುಕುಳ ನೀಡಲು ಸಂಚು ರೂಪಿಸಿದ್ದಾರೆ ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.
ಇತ್ತೀಚೆಗಷ್ಟೇ ಎರಡು ಬಾರಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಅವರು, ನನ್ನನ್ನು ಮಾನಸಿಕವಾಗಿ ಕೆಳ ತಳ್ಳುವ ಉದ್ದೇಶದಿಂದ ಬಿಜೆಪಿ ನನ್ನ ವಿರುದ್ದ ಪಿತೂರಿ ನಡೆಸುತ್ತಿದೆ. ಪ್ರಧಾನಿಯವರು ಗುಜರಾತ್ಗೆ ಆಗಮಿಸುತ್ತಿದ್ದು, ಗಲಭೆ ಪೀಡಿತ ಪ್ರದೇಶಗಳಲ್ಲಿ ಶಾಂತಿ, ಸೌಹಾರ್ದ ಕಾಪಾಡಬೇಕೆಂದು ನಾನು ಮನವಿ ಮಾಡಿದ್ದೆ. ಆದರೆ, ಈ ಮನವಿಯನ್ನೇ ಇಟ್ಟುಕೊಂಡು ನನ್ನ ವಿರುದ್ದ ಎಫ್ಐಆರ್ ದಾಖಲಿಸುವ ಅಗತ್ಯ ಏನಿತ್ತು ಎಂದವರು ಪ್ರಶ್ನಿಸಿದ್ದಾರೆ.
ಇನ್ನು ಎರಡನೇ ಪ್ರಕರಣದಲ್ಲಿ ಮಹಿಳಾ ಪಿಎಸ್ಐಯವರು ನನ್ನ ಮೇಲೆ ದಾಖಲಿಸಿರುವ ದೂರು ವಿಚಾರದಲ್ಲಿ ಅವರ ಮೇಲೆ ಬಿಜೆಪಿ ಸರ್ಕಾರ ಹೇರಿರಬಹುದಾದ ಒತ್ತಡದ ಕುರಿತು ಆಶ್ಚರ್ಯವಾಗುತ್ತಿದೆ. ಸಾವಿರಾರು ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಓಡಿ ಹೋಗಿರುವ ನೀರವ್ ಮೋದಿ, ಮೆಹುಲ್ ಚೋಕ್ಸಿ, ವಿಜಯ್ ಮಲ್ಯರಂತವರನ್ನು ಸರ್ಕಾರ ಬಂಧಿಸುತ್ತಿಲ್ಲ ಎಂದವರು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ದ ನನ್ನ ಹೋರಾಟ ನಿರಂತರ. ಸಂವಿಧಾನದಲ್ಲಿ ನಂಬಿಕೆ ಇಟ್ಟ ನನ್ನಂತವರನ್ನು ತುಳಿಯುವುದೇ ಬಿಜೆಪಿ ಗುರಿ. ನಾನು ಗುಜರಾತಿಗರಿಗಾಗಿ ಸತ್ಯದ ದಾರಿಯಲ್ಲಿ ಸಾಗುತ್ತೇನೆ ಎಂದರು.