ನವದೆಹಲಿ, ಏ 30 (DaijiworldNews/DB): ಗಲಭೆ ಸೃಷ್ಟಿಸುವವರ ಜೊತೆ ನಿಲ್ಲುವ ಕೆಲಸವನ್ನು ಕಾಂಗ್ರೆಸ್ನವರು ಹಿಂದಿನಿಂದಲೇ ಮಾಡಿಕೊಂಡು ಬಂದಿದ್ದಾರೆ. ಅದೇ ಅವರ ನಿಲುವು ಕೂಡಾ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ನವದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಹುಬ್ಬಳ್ಳಿ ಗಲಭೆಕೋರರ ನೆರವಿಗೆ ಧಾವಿಸುವ ಮೂಲಕ ಶಾಸಕ ಜಮೀರ್ ಅಹ್ಮದ್ ಮತ್ತು ಅವರ ಪಕ್ಷ ತಮ್ಮ ನಿಲುವೇನೆಂದು ತೋರಿಸಿಕೊಟ್ಟಿದ್ದಾರೆ. ಡಿ.ಜೆ. ಹಳ್ಳಿ, ಕೆ.ಜೆ. ಹಳ್ಳಿ ಪ್ರಕರಣದಲ್ಲಿಯೂ ಗಲಭೆ ಸೃಷ್ಟಿಸಿದವರ ಜೊತೆಗೇ ನಿಲ್ಲುವ ಕೆಲಸ ಮಾಡಿದರು. ಅವರ ನಿಲುವೇ ಗಲಭೆಕೋರರ ಜೊತೆಗೆ ನಿಲ್ಲುವುದು ಎಂದರು.
ಪಿಎಫ್ಐ ಕರ್ನಾಟಕ ಮಾತ್ರವಲ್ಲ, ಉತ್ತರ ಪ್ರದೇಶ, ಕೇರಳ, ಮಹಾರಾಷ್ಟ್ರದಲ್ಲಿಯೂ ಇದೆ. ಆ ಸಂಘಟನೆಯ ಸಮಗ್ರ ಚಟುವಟಿಕೆ ಕುರಿತು ನಿಗಾ ವಹಿಸಲಾಗುತ್ತಿದೆ. ಇನ್ನು ಪಿಎಫ್ಐ, ಎಸ್ಡಿಪಿಐ ಸಂಘಟನೆಗಳ ನಿಷೇಧ ಕುರಿತು ಕೇಂದ್ರ ಗೃಹ ಸಚಿವರು ಕರ್ನಾಟಕ ಭೇಟಿ ವೇಳೆ ಚರ್ಚೆಗೆ ಬರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.