ನವದೆಹಲಿ, ಏ 30 (DaijiworldNews/DB): ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರು ಭಾರತೀಯ ಭೂ ಸೇನೆಯ ನೂತನ ಮುಖ್ಯಸ್ಥರಾಗಿ ಶನಿವಾರ ಅಧಿಕಾರ ಸ್ವೀಕಾರ ಮಾಡಿದರು.
ಭೂ ಸೇನೆ ಮುಖ್ಯಸ್ಥರಾಗಿದ್ದ ಲೆ.ಜ. ಎಂ.ಎಂ. ನರವಣೆ ಅವರ ಸೇವಾವಧಿ ಇಂದಿಗೆ ಮುಕ್ತಾಯವಾಗಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಕಳೆದ ವಾರವೇ ಕೇಂದ್ರ ಸರ್ಕಾರವು ಮನೋಜ್ ಪಾಂಡೆ ಅವರನ್ನು ನೇಮಕ ಮಾಡಿ ಆದೇಶಿಸಿತ್ತು. ಇಂದು ಅವರು 29ನೇ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು.
ಭೂ ಸೇನೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಮನೋಜ್ ಪಾಂಡೆ ಅವರು ಕಾರ್ಪ್ಸ್ ಆಫ್ ಇಂಜಿನಿಯರ್ಸ್ನ ಮೊದಲ ಅಧಿಕಾರಿಯೂ ಆಗಿದ್ದಾರೆ. ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಭೂಸೇನೆ 117 ಎಂಜಿನಿಯರ್ ರೆಜಿಮೆಂಟ್ನ ಮುಂದಾಳತ್ವ ವಹಿಸಿದ ಅನುಭವಿ ಆಗಿದ್ದಾರೆ.