ನವದೆಹಲಿ, ಏ 30 (DaijiworldNews/DB): ಕಲ್ಲಿದ್ದಲು ಬಿಕ್ಕಟ್ಟು ಸೃಷ್ಟಿಯಾಗಿದೆ ಎನ್ನುತ್ತಿರುವ ರಾಹುಲ್ ಗಾಂಧಿ ಓರ್ವ ನಕಲಿ ಜ್ಯೋತಿಷಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಶನಿವಾರ ರಾಹುಲ್ ವಿರುದ್ದ ಕಿಡಿ ಕಾರಿರುವ ಅವರು, ಇತ್ತೀಚಿನ ದಿನಗಳಲ್ಲಿ ರಾಹುಲ್ ನಕಲಿ ಜ್ಯೋತಿಷಿಯಂತೆ ಬದಲಾಗುತ್ತಿದ್ದಾರೆ. ಕಲ್ಲಿದ್ದಲು ಕೊರತೆಯಿಂದ ದೇಶದಲ್ಲಿ ಏನಾಗುತ್ತಿದೆ ಎಂಬುದರ ಬದಲು ಅವರ ಸರ್ಕಾರ ದೇಶದಲ್ಲಿ ಅಧಿಕಾರದಲ್ಲಿದ್ದಾಗ ನಡೆದ ಕಲ್ಲಿದ್ದಲು ಹಗರಣದ ಬಗ್ಗೆ ಅವರು ಮಾತನಾಡಬೇಕು. ಆ ಹಗರಣದಿಂದಾಗಿ ದೇಶಕ್ಕೆ ಎಷ್ಟು ನಷ್ಟವಾಗಿದೆ ಎಂಬುದನ್ನು ಅವರು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಕಲ್ಲಿದ್ದಲು ಮತ್ತು ವಿದ್ಯುತ್ ಬಿಕ್ಕಟ್ಟು ತಲೆದೋರಿರುವುದರಿಂದ ಪ್ರಧಾನಿಯವರು ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಚಾಲನೆ ನೀಡಬೇಕು. ಅವರಿಗೆ ಜನಸಾಮಾನ್ಯರ ಬಗ್ಗೆ ಕಾಳಜಿಯೇ ಇಲ್ಲದಾಗಿದೆ ಎಂದು ನಿನ್ನೆಯಷ್ಟೇ ರಾಹುಲ್ ಗಾಂಧಿ ಹೇಳಿದ್ದರು. ಅಲ್ಲದೆ ದ್ವೇಷದ ಬುಲ್ಡೋಜರ್ ನಿಲ್ಲಿಸಿ ಜನರಿಗೆ ವಿದ್ಯತ್ ನೀಡಿ ಎಂದು ಆಗ್ರಹಿಸಿದ್ದರು. ರಾಹುಲ್ ಹೇಳಿಕೆ ಬೆನ್ನಲ್ಲೇ ಪ್ರಹ್ಲಾದ್ ಜೋಶಿ ಅವರ ವಿರುದ್ದ ಹರಿ ಹಾಯ್ದಿದ್ದಾರೆ.