ಬೆಂಗಳೂರು, ಏ 30 (DaijiworldNews/DB): ಪಿಎಸ್ಐ ನೇಮಕಾತಿ ರದ್ದತಿ ಮೂಲಕ ಅಕ್ರಮವನ್ನು ಒಪ್ಪಿಕೊಂಡ ಆರಗ ಜ್ಞಾನೇಂದ್ರ ಅವರು ಗೃಹ ಸಚಿವ ಸ್ಥಾನದಲ್ಲಿ ಮುಂದುವರಿಯಲ್ಲಿ ಯಾವ ನೈತಿಕತೆ ಇದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಆರೋಪಿ ಅಧಿಕಾರಿಗಳಿಗೆ ಗೃಹ ಸಚಿವರು ರಕ್ಷಣೆ ನೀಡುತ್ತಿದ್ದಾರೆ. ಅವರನ್ನು ಸಂಪುಟದಿಂದ ವಜಾಗೊಳಿಸಿದರೆ ಮಾತ್ರ ಹಗರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬಹುದು. ಭ್ರಷ್ಟರು, ಅತ್ಯಾಚಾರಿಗಳು, ಕೊಲೆಗಡುಕರನ್ನು ಸಮರ್ಥಿಸಿಕೊಳ್ಳುವುದೇ ತಮ್ಮ ಕೆಲಸ ಎಂದು ಗೃಹ ಸಚಿವರು ಭಾವಿಸಿದ್ದಾರೆ ಎಂದು ಟೀಕಿಸಿದರು.
ಇಂತಹವರಿಂದ ಪೊಲೀಸ್ ಇಲಾಖೆ ಸುರಕ್ಷಿತವಾಗಿ ಇರಲಾರದು. ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಆಗಿದ್ದಲ್ಲಿ ಮರು ಪರೀಕ್ಷೆ ನಡೆದರೂ ಪ್ರಾಮಾಣಿಕರಲ್ಲದ, ಅಸಮರ್ಥರೇ ಪಿಎಸ್ಐಗಳಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದರು.
ದಿವ್ಯಾ ಹಾಗರಗಿ ಬಂಧನವಾಗುತ್ತಿದ್ದಂತೆ ಮರು ಪರೀಕ್ಷೆಗೆ ಸರ್ಕಾರ ಮುಂದಾಗಿದೆ. ಹಾಗಾದರೆ ಆಕೆ ಯಾರ ಹೆಸರನ್ನು ಹೇಳಿದ್ದಾರೆ? ಮರು ಪರೀಕ್ಷೆಯು ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸುವ ಸಲುವಾಗಿಯೋ ಅಥವಾ ಹಗರಣ ಮುಚ್ಚಿ ಹಾಕಿ ಪ್ರಭಾವಿಗಳನ್ನು ರಕ್ಷಿಸುವುದಕ್ಕಾಗಿಯೋ? ಯಾವ ಆಧಾರದಲ್ಲಿ ಸರ್ಕಾರ ಪಿಎಸ್ಐ ನೇಮಕಾತಿಗೆ ಮರು ಪರೀಕ್ಷೆ ಕೈಗೊಂಡಿದೆ ಎಂಬುದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು ಎಂದು ಅವರು ಇದೇ ವೇಳೆ ಒತ್ತಾಯಿಸಿದರು.
ಈ ಹಗರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕಾದರೆ ಹೈಕೋರ್ಟ್ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲೇ ತನಿಖೆಯಾಗಬೇಕು ಎಂದವರು ಆಗ್ರಹಿಸಿದರು.