ಬೆಂಗಳೂರು, ಏ 30 (DaijiworldNews/HR): ಯುವತಿಯ ಮೇಲೆ ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಖರ್ಚು ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಸೆಂಟ್ ಜಾನ್ ಆಸ್ಪತ್ರೆಗೆ ಭೇಟಿ ನೀಡಿ ಯುವತಿಯ ಆರೋಗ್ಯ ಸ್ಥಿತಿ ವಿಚಾರಿಸಿ ಮಾತನಾಡಿದ ಅವರು, ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವ ಘಟನೆ ಇದಾಗಿದ್ದು, ರಾಜ್ಯ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಚಿಕಿತ್ಸೆಯ ಎಲ್ಲಾ ಖರ್ಚು ವೆಚ್ಚವನ್ನು ಸರ್ಕಾರವೇ ನೋಡಿಕೊಳ್ಳಲಿದೆ ಎಂದರು.
ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಇಂದು ಅಥವಾ ನಾಳೆಯೊಳಗೆ ಆರೋಪಿ ಬಂಧಿಸಲಾಗುವುದು. ಸಂತ್ರಸ್ಥ ಯುವತಿ ಭವಿಷ್ಯ ರೂಪಿಸುವ ಸಲುವಾಗಿ ಸರ್ಕಾರಿ ಉದ್ಯೋಗ ನೀಡಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯೊಂದಿಗೆ ಮಾತನಾಡುತ್ತೇನೆ ಎಂದಿದ್ದಾರೆ.
ಇನ್ನು ಯುವತಿಗೆ ಸ್ಕಿನ್ ಬ್ಯಾಂಕ್ ನಿಂದ ಸ್ಕಿನ್ ನೀಡಲಾಗುವುದು. ನಾಗರಿಕ ಸಮಾಜದಲ್ಲಿ ಹೃದಯ ಕಲಕುವ ಘಟನೆ ಇದಾಗಿದೆ ಎಂದು ಹೇಳಿದ್ದಾರೆ.