ಬೆಂಗಳೂರು, ಏ 30 (DaijiworldNews/DB): ಅಕ್ರಮ ಆರೋಪದಿಂದ ಗೊಂದಲದ ಗೂಡಾಗಿರುವಪಿಎಸ್ಐ ಹುದ್ದೆಗೆ ಮರು ಪರೀಕ್ಷೆ ನಡೆಸುವ ತೀರ್ಮಾನವನ್ನು ಸರ್ಕಾರ ಕೈಗೊಂಡ ಬೆನ್ನಲ್ಲೇ ಪ್ರಾಮಾಣಿಕ ಅಭ್ಯರ್ಥಿಗಳು ಇದೀಗ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮದ ಆರೋಪಿ, ತಲೆಮರೆಸಿಕೊಂಡಿದ್ದ ದಿವ್ಯಾ ಹಾಗರಗಿ ಬಂಧನವಾಗುತ್ತಿದ್ದಂತೆಯೇ ಮರು ಪರೀಕ್ಷೆ ನಡೆಸುವ ತೀರ್ಮಾನವನ್ನು ಸರ್ಕಾರ ಕೈಗೊಂಡಿತ್ತು. ಇದರಿಂದ ತಮಗೆ ಅನ್ಯಾಯವಾಗುತ್ತದೆ ಎಂದು ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾದ ಅಭ್ಯರ್ಥಿಗಳು ಹೋರಾಟ ನಡೆಸುತ್ತಿದ್ದಾರೆ.
ಮರು ಪರೀಕ್ಷೆ ನಿರ್ಧಾರವನ್ನು ಸರ್ಕಾರ ಹಿಂಪಡೆಯಬೇಕು. ಆರೋಪಿತರ ಮತ್ತು ತಪ್ಪಿತಸ್ಥರ ಆಯ್ಕೆ ರದ್ದುಗೊಳಿಸಿ ಉಳಿದವರಿಗೆ ನೇಮಕಾತಿ ಆದೇಶ ನೀಡಬೇಕು. ಪ್ರಾಮಾಣಿಕರಿಗೆ ಅನ್ಯಾಯ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಅಕ್ರಮ ಆರೋಪದಲ್ಲಿ ಕೇವಲ ಎಂಟು ಮಂದಿಯನ್ನು ಬಂಧಿಸಿ ಇಡೀ ಪರೀಕ್ಷೆ ರದ್ದು ಮಾಡುವುದು ಸರಿಯಲ್ಲ. ಇದರ ಹಿಂದೆ ಇನ್ನೆಷ್ಟು ಮಂದಿ ಇದ್ದಾರೆ ಎಂಬುದು ಬಯಲಾಗಬೇಕು. ಸಿಐಡಿ, ಸಿಬಿಐ ತನಿಖೆಯೂ ಆಗಲಿ. ಆದರೆ ತರಾತುರಿ ನಿರ್ಧಾರ ತೆಗೆದುಕೊಂಡು ನಮಗೆ ಅನ್ಯಾಯ ಎಸಗಬೇಡಿ ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.
ಮರು ಪರೀಕ್ಷೆ ನಿರ್ಧಾರವನ್ನು ಸರ್ಕಾರ ಹಿಂತೆಗೆದುಕೊಳ್ಳುವವರೆಗೂ ಹೋರಾಟ ನಿಲ್ಲುವುದಿಲ್ಲ. ಏಕೆಂದರೆ ಇದು ನಮ್ಮ ಬದುಕಿನ ಪ್ರಶ್ನೆಯಾಗಿದ್ದು, ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಅಲ್ಲದೆ, ಈ ಬಗ್ಗೆ ಚರ್ಚಿಸಿ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಲಾಗುವುದು ಎಂದು ಪಿಎಸ್ಐ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ತಿಳಿಸಿದ್ದಾರೆ.