ಉತ್ತರ ಪ್ರದೇಶ, ಏ 30 (DaijiworldNews/DB): ವಧು ವರರು ಹಾರ ಬದಲಾಯಿಸುವ ವೇಳೆಗೆ ವಧುವಿನ ಮಾಜಿ ಪ್ರಿಯಕರ ಗುಂಡು ಹಾರಿಸಿ ವಧುವನ್ನು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. ಸಂಭ್ರಮದಲ್ಲಿದ್ದ ಮದುವೆ ಮನೆ ಇದೀಗ ಸ್ಮಶಾನದಂತಾಗಿದೆ.
ಮೃತ ವಧುವನ್ನು ಕಾಜಲ್ ಎಂದು ಗುರುತಿಸಲಾಗಿದೆ. ಆಕೆಯ ಮಾಜಿ ಪ್ರೇಮಿ ಅನೀಶ್ ಗುಂಡು ಹಾರಿಸಿ ಕೊಲೆ ಮಾಡಿರುವ ಆರೋಪಿ. ಮಥುರಾ ಜಿಲ್ಲೆಯ ಮುಬಾರಿಕ್ಪುರ್ ಗ್ರಾಮದಲ್ಲಿ ಮದುವೆ ನಡೆಯುತ್ತಿತ್ತು. ಈ ವೇಳೆ ವಧು-ವರರು ಪರಸ್ಪರ ಹಾರ ಬದಲಾಯಿಸುತ್ತಿದ್ದ ವೇಳೆ ವಧುವಿನ ಮಾಜಿ ಪ್ರೇಮಿ ಅನೀಶ್ ಆಗಮಿಸಿ ವಧುವಿಗೆ ಗುರಿಯಿಟ್ಟು ಗುಂಡು ಹಾರಿಸಿದ್ದಾನೆ. ಗುಂಡು ಆಕೆಯ ಎಡಗಣ್ಣಿಗೆ ತಗುಲಿದ್ದು, ಇದರಿಂದ ಆಕೆ ನೆಲಕ್ಕುರುಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆ. ಆಕೆಯ ಉಸಿರು ನಿಲ್ಲುತ್ತಿದ್ದಂತೆ ಆರೋಪಿ ಅನೀಲ್ ಪರಾರಿಯಾಗಿದ್ದಾನೆ. ಮದುವೆಯಲ್ಲಿ ನೂರಾರು ಜನರು ಸೇರಿದ್ದರೂ ಆತ ಚಾಣಾಕ್ಷತನದಿಂದ ಪರಾರಿಯಾಗಿದ್ದಾನೆ.
ಅನೀಶ್ ಮತ್ತು ಕಾಜಲ್ ಪ್ರೀತಿಸುತ್ತಿದ್ದರು. ಬಳಿಕ ಅನೀಶ್ ಜೊತೆ ಮದುವೆ ನಿರಾಕರಿಸಿ ಬೇರೊಬ್ಬನೊಂದಿಗೆ ಮದುವೆಗೆ ಕಾಜಲ್ ಮುಂದಾಗಿದ್ದಳು. ಇದರಿಂದ ಕೋಪಗೊಂಡ ಅನೀಶ್ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಮೃತ ವಧು ಕಾಜಲ್ ತಂದೆ ಖುಬಿ ರಾಮ್ ಪ್ರಜಾಪತಿ ಅವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿ ಅನೀಶ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.