ಜೈಪುರ, ಏ 30 (DaijiworldNews/DB): ವರದಕ್ಷಿಣೆ ಕೊಡದ ಸಿಟ್ಟಿಗೆ ಪತ್ನಿಯ ಮೇಲೆ ಪತಿಯೇ ಸಂಬಂಧಿಕರಿಂದ ಸಾಮೂಹಿಕ ಅತ್ಯಾಚಾರ ನಡೆಸಿದ ಆತಂಕಕಾರಿ ಘಟನೆ ರಾಜಸ್ಥಾನದ ಭರತ್ಪುರದಲ್ಲಿ ನಡೆದಿದೆ.
1.5 ಲಕ್ಷ ರೂ. ವರದಕ್ಷಿಣೆ ಕೊಡಲು ಪತ್ನಿ ಕಡೆಯವರು ವಿಫಲರಾದ ಕಾರಣಕ್ಕೆ ಆತ ಈ ಕೃತ್ಯ ಎಸಗಿದ್ದಾನೆ. ಅಲ್ಲದೆ ಅತ್ಯಾಚಾರದ ವೀಡಿಯೊವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಯೂಟ್ಯೂಬ್ಗೆ ಈ ವೀಡಿಯೋವನ್ನು ಅಪ್ಲೋಡ್ ಮಾಡಿ ವರದಕ್ಷಿಣೆ ಹಣ ಪಡೆಯುವುದಾಗಿ ಪತಿ ಪತ್ನಿಗೆ ಹೇಳಿದ್ದಾನೆ. ಇದರಿಂದ ಆತಂಕಗೊಂಡ ಪತ್ನಿ ಪತಿ ಮತ್ತು ಇಬ್ಬರು ಸಂಬಂಧಿಕರ ಮೇಲೆ ಲೈಂಗಿಕ ದೌರ್ಜನ್ಯ ಕೇಸು ದಾಖಲಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಭರತ್ಪುರದ ಕಮಾನ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ದೌಲತ್ ಸಾಹು ಮಹಿಳೆ ದೂರು ದಾಖಲಿಸಿದ್ದಾರೆ. ಆದರೆ ಯೂಟ್ಯೂಬ್ಗೆ ವೀಡಿಯೊ ಅಪ್ಲೋಡ್ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದರೂ, ಇನ್ನೂ ದೃಢಪಟ್ಟಿಲ್ಲ ಎಂದಿದ್ದಾರೆ.
ಅತ್ತೆ, ಪತಿ ಮತ್ತಿತರರು ನಿರಂತರವಾಗಿ ನನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ಅವರಿಗೆ ಹಣ ಸಿಗದಿದ್ದಾಗ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುವಂತೆ ಮಾಡಿದರು. ಆರೋಪಿಗಳ ಪೈಕಿ ಓರ್ವ ನನ್ನನ್ನು ಕಮಾನ್ಗೆ ಕರೆ ತಂದು ಅಲ್ಲಿ ಅತ್ಯಾಚಾರವೆಸಗಿದ್ದಾನೆ. ಸಾಮೂಹಿಕ ಅತ್ಯಾಚಾರದ ವೀಡಿಯೋ ಚಿತ್ರೀಕರಿಸಿ ಯೂಟ್ಯೂಬ್ಗೆ ಹಾಕಿದ್ದಾರೆ ಎಂದು ದೂರಿನಲ್ಲಿ ಆಕೆ ತಿಳಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದು, ಅಂದಿನಿಂದಲೇ ಕಿರುಕುಳ ನಡೆಯುತ್ತಿತ್ತು. ಈ ನಡುವೆ ಪತಿ ಮನೆಯವರ ಕಿರುಕುಳ ತಾಳಲಾರದೆ ಆಕೆ ಪೋಷಕರ ಮನೆಗೆ ತೆರಳಿದ್ದರು. ಆದರೆ ಪತಿ ಮನಸ್ಸು ಬದಲಾಯಿಸಿ ಆಕೆಯನ್ನು ಕರೆ ತಂದಿದ್ದ. ಬಳಿಕ ಯಥಾ ಪ್ರಕಾರ ಕಿರುಕುಳ ನೀಡುವುದನ್ನು ಮುಂದುವರಿಸಿದ್ದು, ಇದೀಗ ಸಾಮೂಹಿಕ ಅತ್ಯಾಚಾರ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.