ನವದೆಹಲಿ, ಏ 29 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರು ದ್ವೇಷದ ಬುಲ್ಡೋಜರ್ ಕಾರ್ಯಾಚರಣೆಯನ್ನು ನಿಲ್ಲಿಸಿ ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಚಾಲನೆ ನೀಡುವತ್ತ ಗಮನ ಹರಿಸಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಲಹೆ ಮಾಡಿದ್ದಾರೆ.
ದೆಹಲಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ದೇಶದಲ್ಲಿ ತೀವ್ರ ವಿದ್ಯುತ್ ಬಿಕ್ಕಟ್ಟು ಸೃಷ್ಟಿಯಾಗಿದೆ. ಕಲ್ಲಿದ್ದಲು ಕೊರತೆಯೂ ಎದುರಾಗಿರುವುದರಿಂದ ಜನರ ಬಗೆಗೆ ಯೋಚಿಸಬೇಕು. ದ್ವೇಷದ ಬುಲ್ಡೋಜರ್ ನಿಲ್ಲಿಸಿ ದೇಶವಾಸಿಗಳನ್ನು ಕತ್ತಲಿನಿಂದ ಬೆಳಕಿನೆಡೆಗೆ ತರುವುದರತ್ತ ಗಮನ ಹರಿಸಿ ಎಂದರು.
ದೇಶದಲ್ಲಿ ಸೃಷ್ಟಿಯಾಗಿರುವ ವಿದ್ಯುತ್ ಮತ್ತು ಕೈಗಾರಿಕಾ ಬಿಕ್ಕಟ್ಟು ಹಲವು ಸಣ್ಣ ಕೈಗಾರಿಕೆಗಳ ನಾಶಕ್ಕೆ ಕಾರಣವಾಗಲಿದೆ. ಇದರಿಂದ ನಿರುದ್ಯೋಗ ಹೆಚ್ಚಾಗಲಿದೆ. ಮಕ್ಕಳು, ಆಸ್ಪತ್ರೆಯಲ್ಲಿರುವ ರೋಗಿಗಳಿಗೂ ಸಮಸ್ಯೆ ಹೆಚ್ಚಲಿದೆ. ರೈಲು, ಮೆಟ್ರೋ ಸೇವೆ ಸಾಧ್ಯವಾಗದೆ ಆರ್ಥಿಕ ಬಿಕ್ಕಟ್ಟು ತಲೆದೋರಲಿದೆ. ಮೋದಿಯವರು ಈ ಎಲ್ಲಾ ಸಮಸ್ಯೆಗಳಿಂದ ದೇಶವಾಸಿಗಳನ್ನು ರಕ್ಷಿಸಬೇಕು. ಅದಕ್ಕಾಗಿ ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು.