ಬೆಂಗಳೂರು, ಏ 29 (DaijiworldNews/DB): ಹಳೆ ಹುಬ್ಬಳ್ಳಿ ಗಲಭೆಕೋರರ ಕುಟುಂಬಕ್ಕೆ ಶಾಸಕ ಜಮೀರ್ ಅಹ್ಮದ್ ಖಾನ್ ಪಡಿತರ ವಿತರಿಸಿದ್ದಾರೆ ಎಂಬ ಬಿಜೆಪಿ ಆರೋಪವನ್ನು ಶಾಸಕ ಜಮೀರ್ ಅಹ್ಮದ್ ಖಾನ್ ತಳ್ಳಿ ಹಾಕಿದ್ದು, ತಾನು ಧಾರ್ಮಿಕ ಯಾತ್ರೆಗಾಗಿ ಮಕ್ಕಾದಲ್ಲಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕಳೆದ 17ನೇ ತಾರೀಖಿನಂದು ಬೆಂಗಳೂರು ತೊರೆದು ಧಾರ್ಮಿಕ ಯಾತ್ರೆಗಾಗಿ ಮಕ್ಕಾಗೆ ಬಂದಿದ್ದೇನೆ. ಈಗ ನನ್ನ ವಿರುದ್ಧ ಮಾಡಲಾಗುತ್ತಿರುವ ಆರೋಪಗಳಿಗೂ ನನಗೂ ಯಾವ ರೀತಿಯ ಸಂಬಂಧವೂ ಇಲ್ಲ. ಈ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ತಿಳಿಸಿದ್ದಾರೆ. ಟ್ವೀಟ್ ಮತ್ತು ಫೇಸ್ಬುಕ್ ಮೂಲಕ ಶುಕ್ರವಾರ ಸಂಜೆ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.
ಜಮೀರ್ ಅಹ್ಮದ್ ಖಾನ್ ಅವರು ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳ ಕುಟುಂಬಗಳಿಗೆ ಪಡಿತರ ವಿತರಣೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ವಿವಿಧ ನಾಯಕರು ಪ್ರತಿಕ್ರಿಯೆ ನೀಡಿದ್ದರು. ಆರೋಪಿಗಳಿಗೆ ಬೆಂಬಲ ನೀಡುವುದೇ ಜಮೀರ್ ಮನಸ್ಥಿತಿ ಎಂದು ಪ್ರತಾಪ್ ಸಿಂಹ್ ಹೇಳಿದ್ದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಅವರೂ ಈ ಸಂಬಂಧ ಪ್ರತಿಕ್ರಿಯಿಸಿ, ಜಮೀರ್ ಕೆ.ಜೆ. ಹಳ್ಳಿ, ಡಿ.ಜೆ. ಹಳ್ಳಿ ಪ್ರಕರಣದಲ್ಲಿಯೂ ಆರೋಪಿಗಳ ಪರವಾಗಿದ್ದರು. ಅವರಿಗೆ ಕಾಂಗ್ರೆಸ್ ನೆರವು ನೀಡುವ ಪಾತ್ರ ಮಾಡುತ್ತಿದೆ ಎಂದಿದ್ದರು. ಈ ಎಲ್ಲಾ ಹೇಳಿಕೆಗಳಿಗೆ ಜಮೀರ್ ಅಹ್ಮದ್ ಖಾನ್ ಸಾಮಾಜಿಕ ತಾಣಗಳ ಮೂಲಕ ಸ್ಪಷ್ಟನೆ ನೀಡಿದ್ದು ತಾನು ಬೆಂಗಳೂರಿನಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.