ಗಾಂಧಿನಗರ, ಏ 29 (DaijiworldNews/DB): ಉತ್ತಮ ಆಡಳಿತ ಮತ್ತು ಪಕ್ಷ ಸಂಘಟನೆ ನಿಟ್ಟಿನಲ್ಲಿ ಬಿಜೆಪಿಗೆ ಗುಜರಾತ್ ಪ್ರಯೋಗಾಲಯವಾಗಿದೆ. ದೇಶಾದ್ಯಾಂತ ಗುಜರಾತ್ ಮಾದರಿಯನ್ನು ಜಾರಿಗೆ ತರಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.
ಗಾಂಧಿನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ರಾಜ್ಯದಲ್ಲಿ ಗುಜರಾತ್ ಮಾದರಿ ಪ್ರಯೋಗ ಯಶಸ್ವಿಯಾಗಿದೆ. ವಿಜಯ್ ರೂಪಾನಿ ಸಚಿವ ಸಂಪುಟದ ಅನಿರೀಕ್ಷಿತ ಬದಲಾವಣೆಯೂ ಈ ಪ್ರಯೋಗದ ಭಾಗ. ಹೀಗಾಗಿ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಇದನ್ನು ಜಾರಿಗೆ ತರಲಾಗುತ್ತದೆ. ಇದನ್ನು ದೇಶಾದ್ಯಂತ ಅಳವಡಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದರು.
ಪ್ರಧಾನಿ ಮೋದಿಯವರು ಬಿಜೆಪಿ ಪದಾಧಿಕಾರಿಯಾಗಿ ಹಂತ ಹಂತವಾಗಿ ಮೇಲೆ ಬಂದು ರಾಜ್ಯದ ಮುಖ್ಯಮಂತ್ರಿಯಾದರು. ಆನಂತರ ಅವರ ನಾಯಕತ್ವದಲ್ಲಿ ಪಕ್ಷ ಬಲವರ್ಧನೆ ಮತ್ತು ಅದೊಂದು ಬದಲಾವಣೆಯ ಮಾಧ್ಯಮವಾಗಿ ರೂಪು ತಳೆಯಲು ಮಾಡಿದ ಯಶಸ್ವಿ ಪ್ರಯೋಗಗಳು ಗುಜರಾತ್ನಲ್ಲಿ ನಿರೀಕ್ಷೆಗೂ ಮೀರಿ ಯಶ ಕಂಡಿದೆ ಎಂದವರು ತಿಳಿಸಿದರು.