ದೊಡ್ಡಬಳ್ಳಾಪುರ, ಏ 29 (DaijiworldNews/DB): ರಾಜ್ಯದಲ್ಲಿ ಮಾತು ತಪ್ಪದ ಏಕೈಕ ನಾಯಕ ಕುಮಾರಸ್ವಾಮಿಯವರು. ರೈತರ ಸಾಲ ಮನ್ನಾವೇ ಇದಕ್ಕೆ ಸಾಕ್ಷಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಕನಸವಾಡಿಯಲ್ಲಿ ಶುಕ್ರವಾರ ನಡೆದ ಜನತಾ ಜಲಧಾರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುಮಾರಸ್ವಾಮಿಯವರು ನುಡಿದಂತೆ ನಡೆಯುತ್ತಾರೆ. ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಅವರು ಎಂದೂ ಹಿಂದೆ ಮುಂದೆ ನೋಡಿಲ್ಲ. ರೈತರ ಸಾಲದ ಹೊರೆ ಇಳಿಸುವುದಾಗಿ ಮಾತು ಕೊಟ್ಟಿದ್ದ ಅವರು ಬಳಿಕ ರೈತರ ಸಾಲ ಮನ್ನಾ ಮಾಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಕುಮಾರಸ್ವಾಮಿಯವರಿಗೆ ಎಲ್ಲರೂ ಬೆಂಬಲಿಸಿ ಮತ್ತೆ ಬಡವರ, ರೈತರ ಪರವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದವರು ಮನವಿ ಮಾಡಿದರು.
ರಾಜ್ಯದಲ್ಲಿ ಧರ್ಮಗಳ ನಡುವೆ ಕಂದಕ ಉಂಟು ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಆದರೆ ಬಿಜೆಪಿಯ ಈ ಕೆಲಸಕ್ಕೆ ಕಾಂಗ್ರೆಸ್ನವರು ಸುಮ್ಮನೇ ಕುಳಿತರೇ ಹೊರತು ಮಾತನಾಡಲಿಲ್ಲ. ಆದರೆ ಕುಮಾರಸ್ವಾಮಿಯವರು ಎರಡೂ ಪಕ್ಷಗಳ ನಿಲುವನ್ನು ಖಂಡಿಸಿದರು. ರಾಜ್ಯದಲ್ಲಿ ಶಾಂತಿ, ಸಾಮರಸ್ಯ ಮೂಡಬೇಕಾದರೆ ಜೆಡಿಎಸ್ಗೆ ಬೆಂಬಲ ಅಗತ್ಯವಾಗಿದೆ ಎಂದವರು ಇದೇ ವೇಳೆ ತಿಳಿಸಿದರು.