ನವದೆಹಲಿ, ಏ 29 (DaijiworldNews/DB): ಕಳೆದ ಆರು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರವು ಶೇ. 250ರಷ್ಟು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 2014ರಲ್ಲಿ ಪೆಟ್ರೋಲ್ ಮೇಲೆ ಕೇವಲ 9.48 ರೂ. ಮತ್ತು ಡೀಸೆಲ್ ಮೇಲೆ 3.56 ರೂ. ಅಬಕಾರಿ ಸುಂಕ ವಿಧಿಸಲಾಗಿತ್ತು. ಆದರೆ 2014-15 ಮತ್ತು 2020-21ರ ನಡುವೆ ತೆರಿಗೆ ಶೇ. 250ರಷ್ಟು ಹೆಚ್ಚಳವಾಗಿದೆ ಎಂದಿದ್ದಾರೆ. ಇದಕ್ಕೆ ಪೂರಕವಾಗುವಂತೆ ಮಾಧ್ಯಮ ವರದಿಗಳನ್ನೂ ಟ್ಯಾಗ್ ಮಾಡಿದ್ದಾರೆ.
ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ಹಲವು ರಾಜ್ಯಗಳಲ್ಲಿ ಇಂಧನ ದರ ಏರಿಕೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಬೆನ್ನಲ್ಲೇ ಪ್ರಿಯಾಂಕಾ ಅವರು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.