ಮುಂಬಯಿ, ಏ 29 (DaijiworldNews/DB): ಶಿವಸೇನೆ ಮುಖಂಡ, ಸಂಸದ ರಾಹುಲ್ ಶೆವಾಲೆ ವಿರುದ್ಧ ಮುಂಬೈನ ಉಪನಗರದಲ್ಲಿರುವ ಸಕಿನಾಕಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಾಗಿದೆ.
26 ವರ್ಷದ ಯುವತಿಯೋರ್ವಳು ಗುರುವಾರ ಈ ಆರೋಪ ಹೊರಿಸಿದ್ದು, ದೂರು ದಾಖಲು ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಇಲ್ಲಿವರೆಗೆ ತನಿಖೆ ಆರಂಭವಾಗಿಲ್ಲ.
ಆದರೆ ಈ ಆರೋಪವನ್ನು ಸಂಸದ ಶೆವಾಲೆ ತಳ್ಳಿ ಹಾಕಿದ್ದು, ಇದು ತನ್ನ ರಾಜಕೀಯ ಜೀವನವನ್ನು ಹಾಳು ಮಾಡುವ ಉದ್ದೇಶದಿಂದ ಮಾಡಲಾದ ಕುತಂತ್ರ ಎಂದಿದ್ದಾರೆ. ಆರೋಪದಲ್ಲಿ ಹುರುಳಿಲ್ಲ. ನನ್ನನ್ನು ಬಲಿಪಶು ಮಾಡಲಾಗುತ್ತಿದೆ. ಪೊಲೀಸರ ಯಾವುದೇ ತನಿಖೆಯನ್ನು ಈ ಸಂಬಂಧ ಎದುರಿಸಲು ಸಿದ್ದ. ಅಲ್ಲದೆ ಈ ಕುತಂತ್ರದ ಹಿಂದೆ ಇರುವವರ ಹೆಸರನ್ನು ಶೀಘ್ರವೇ ಬಹಿರಂಗಪಡಿಸಲಾಗುವುದು ಎಂದವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.