ನವದೆಹಲಿ, ಏ 29 (DaijiworldNews/DB): ಅಮೆಜಾನ್ ಇಂಕ್ ಮತ್ತು ಫ್ಲಿಪ್ಕಾರ್ಟ್ನ ಆನ್ಲೈನ್ ಶಾಪಿಂಗ್ ತಾಣಗಳ ಉನ್ನತ ಮಾರಾಟಗಾರ ಮೇಲೆ ತನಿಖಾಧಿಕಾರಿಗಳ ದಾಳಿ ಮುಂದುವರೆದಿದ್ದು, ಇಂದು ದತ್ತಾಂಶ ಮತ್ತು ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಭಾರತೀಯ ಸ್ಪರ್ಧಾತ್ಮಕ ಆಯೋಗವು (ಸಿಸಿಐ) ಈ ದಾಳಿಯನ್ನು ನಡೆಸುತ್ತಿದೆ. ಗುರುವಾರದಿಂದ ದಾಳಿ ಆರಂಭವಾಗಿದ್ದು, ಅಮೆಜಾನ್ ಪ್ಲಾಟ್ಫಾರ್ಮ್ ಕ್ಲೌಡ್ಟೇಲ್ ಮತ್ತು ಅಪ್ಪಾರಿಯೊದಲ್ಲಿ ಇಬ್ಬರು ಉನ್ನತ ದೇಶೀಯ ಮಾರಾಟಗಾರರು ಹಾಗೂ ವಾಲ್ಮಾರ್ಟ್ ಫ್ಲಿಪ್ಕಾರ್ಟ್ನ ಕೆಲವು ಮಾರಾಟಗಾರರ ಮೇಲೆ ದಾಳಿ ನಡೆದಿದೆ. 2020ರಲ್ಲಿ ಸಿಸಿಐ ತನಿಖೆಗೆ ಆದೇಶಿಸಿದ ಸಂಬಂಧ ಈ ದಾಳಿ ನಡೆದಿದೆ. ಆನ್ಲೈನ್ ಶಾಪಿಂಗ್ ವೆಬ್ಸೈಟ್ಗಳಲ್ಲಿ ಕೆಲವು ಮಾರಾಟಗಾರರ ಪಟ್ಟಿಗಳಿಗೆ ಮಾತ್ರ ಆದ್ಯತೆ ನೀಡುವ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.
ಶುಕ್ರವಾರದಂದು ಸಿಸಿಐ ತನಿಖಾಧಿಕಾರಿಗಳು ಮಾರಾಟಗಾರ ಕಂಪೆನಿಯ ವಿವಿಧ ಅಧಿಕಾರಿಗಳನ್ನು ವಿಚಾರಣೆ ನಡೆಸಿದ್ದಾರೆ. ಬಳಿಕ ದಾಖಲೆಗಳನ್ನು ಕೂಡಾ ವಶಪಡಿಸಿಕೊಂಡಿದ್ದಾರೆ. ಇಮೇಲ್, ವಾಟ್ಸಾಪ್ ಚಾಟ್ ಸೇರಿದಂತೆ ಎಲ್ಲಾ ಅಗತ್ಯ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.