ತೆಲಂಗಾಣ, ಏ 29 (DaijiworldNews/HR): ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಪತಿಯೊಬ್ಬ ತನ್ನ ಗರ್ಭಿಣಿ ಪತ್ನಿಗೆ ಬಲವಂತವಾಗಿ ಟಾಯ್ಲೆಟ್ ಸ್ವಚ್ಛಗೊಳಿಸುವ ಲಿಕ್ವಿಡ್ ಅನ್ನು ಕುಡಿಸಿದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಾಲ್ಕು ವರ್ಷದ ಹಿಂದೆ ತರುಣ್ ಎಂಬಾತ ಕಲ್ಯಾಣಿಯನ್ನು ವಿವಾಹವಾಗಿದ್ದು, ಮೂರು ತಿಂಗಳ ಹಿಂದೆ ಕಲ್ಯಾಣಿ ಗರ್ಭಿಣಿಯಾಗಿದ್ದು, ಬಳಿಕ ಪತಿ ತರುಣ್, ಆಕೆ ಸುಂದರವಾಗಿ ಕಾಣುತ್ತಿಲ್ಲ ಎಂದು ಆರೋಪಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಇನ್ನು ಇವರಿಬ್ಬರ ನಡುವಿನ ಜಗಳ ತಾರಕಕ್ಕೇರಿದ್ದು, ಈ ಸಂದರ್ಭದಲ್ಲಿ ತರುಣ್ ಪತ್ನಿ ಕಲ್ಯಾಣಿಗೆ ಬಲವಂತದಿಂದ ಟಾಯ್ಲೆಟ್ ಕ್ಲೀನಿಂಗ್ ಲಿಕ್ವಿಡಿ ಕುಡಿಸಿದ್ದಾನೆ ಎಂದು ತಿಳಿದು ಬಂದಿದೆ.
ಕಲ್ಯಾಣಿಯನ್ನು ಆಕೆಯನ್ನು ನಿಜಾಮಾಬಾದ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತರುಣ್ ವಿರುದ್ದ ಕಲ್ಯಾಣಿ ಮನೆಯವರು ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 302, 304 ಬಿ ಮತ್ತು 498-ಎ ಅಡಿ ದೂರು ದಾಖಲಿಸಿದ್ದಾರೆ.