ಚೆನ್ನೈ, ಏ 29 (DaijiworldNews/DB): ಬಸ್ನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕನಿಗೆ ಹಠಾತ್ ಎದೆನೋವು ಕಾಣಿಸಿಕೊಂಡ ಕಾರಣ ಬಸ್ ಚಾಲಕ ಆಂಬುಲೆನ್ಸ್ಗಾಗಿ ಕಾಯದೆ ಸರ್ಕಾರಿ ಬಸ್ನ್ನು ನೇರವಾಗಿ ಆಸ್ಪತ್ರೆಗೆ ತಂದು ಪ್ರಯಾಣಿಕನ ಚಿಕಿತ್ಸೆಗೆ ನೆರವಾದ ಮಾನವೀಯ ಘಟನೆ ತಮಿಳುನಾಡಿನ ತೆಂಕಶಿ ಬಳಿ ನಡೆದಿದೆ.
ತೆಂಕಶಿ ಮತ್ತು ತಿರುನಲ್ವೇಲಿ ನಡುವೆ ಬಸ್ ಸಂಚರಿಸುತ್ತಿದ್ದ ವೇಳೆ ಪ್ರಯಾಣಿಕ ಸಾಹುಲ್ ಹಮೀದ್ ಅವರಿಗೆ ಹಠಾತ್ ಎದೆನೋವು ಕಾಣಿಸಿಕೊಂಡಿದೆ. ಪ್ರಯಾಣಿಕ ಚೀರಾಡುತ್ತಿರುವುದನ್ನು ಗಮನಿಸಿದ ಚಾಲಕ ವಿ. ಆರುಮುಗಸಾಮಿ ಮತ್ತು ನಿರ್ವಾಹಕ ಕುಟ್ಟಿಸಾಮಿ ಅವರು ತತ್ಕ್ಷಣ ಪ್ರಯಾಣಿಕನ ಬಗ್ಗೆ ವಿಚಾರಿಸಿಕೊಂಡು ಆಂಬುಲೆನ್ಸ್ಗೆ ಕರೆ ಮಾಡಿದ್ದಾರೆ. ಆದರೆ ನೋವು ತೀವ್ರತೆ ಪಡೆದ ಹಿನ್ನೆಲೆಯಲ್ಲಿ ಆಂಬುಲೆನ್ಸ್ ಬರುವುದನ್ನು ಕಾಯದೆ ಸೀದಾ ಬಸ್ನ್ನು ಅಲಂಗುಲಂ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು ಪ್ರಯಾಣಿಕನ ಚಿಕಿತ್ಸೆಗೆ ನೆರವಾಗಿದ್ದಾರೆ. ಉಳಿದ ಪ್ರಯಾಣಿಕರ ಒಪ್ಪಿಗೆ ಮೇರೆಗೆ ಚಾಲಕ ಮತ್ತು ನಿರ್ವಾಹಕ ಈ ಶ್ಲಾಘನೀಯ ಕೆಲಸ ಮಾಡಿದ್ದು, ವ್ಯಕ್ತಿಯೊಬ್ಬರ ಪ್ರಾಣ ಉಳಿಸುವಲ್ಲಿ ಮಾನವೀಯ ನಡೆ ಅನುಸರಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ತಿರುನೆಲ್ವೇಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಯಿತು.
ಮೊದಲು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಬಳಿಕ ಆತನ ಸಂಬಂಧಿಕರಿಗೆ ಮಾಹಿತಿ ರವಾನಿಸಲಾಗಿದೆ. ಆತನ ದಾಖಲೆ ಪರಿಶೀಲಿಸಿದ ವೇಳೆ ಆತ ಹೃದ್ರೋಗಿ ಎಂಬುದು ಗೊತ್ತಾಗಿತ್ತು. ಹೀಗಾಗಿ ಆತನಿಗೆ ತುರ್ತು ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿ ಇತರ ಪ್ರಯಾಣಿಕರ ಒಪ್ಪಿಗೆ ಪಡೆದು ಆಸ್ಪತ್ರೆಗೆ ಬಸ್ ಕೊಂಡೊಯ್ಯಲಾಯಿತು. ಇದರಿಂದಾಗಿ ಬಸ್ ಸುಮಾರು 50 ನಿಮಿಷಗಳು ತಡವಾಯಿತಾದರೂ ಪ್ರಯಾಣಿಕನೊಬ್ಬನ ಪ್ರಾಣಕ್ಕೆ ನೆರವಾದ ಖುಷಿ ಇದೆ ಎಂದು ಚಾಲಕ ಹಮೀದ್ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.