ನವದೆಹಲಿ, ಏ 29 (DaijiworldNews/MS): ಕಲ್ಲಿದ್ದಲು ಸಾಗಣೆಗೆ ತ್ವರಿತವಾಗಿಸಲು ಅನುಕೂಲವಾಗುವಂತೆ ದೇಶಾದ್ಯಂತ 42 ಪ್ರಯಾಣಿಕ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಈ ರೈಲುಗಳನ್ನು ಅನಿರ್ದಿಷ್ಟಾವಧಿಗೆ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಇಂದು ತಿಳಿಸಿದ್ದಾರೆ.
ಹಲವು ರಾಜ್ಯಗಳಲ್ಲಿ ವಿದ್ಯುತ್ ಕೊರತೆ ಎದುರಾಗಿದ್ದು, ಕಲ್ಲಿದ್ದಲಿಗೆ ಬೇಡಿಕೆ ಹೆಚ್ಚಾಗಿದೆ.ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ವೇಗವಾಗಿ ಖಾಲಿಯಾಗುತ್ತಿದೆ. ಕಲ್ಲಿದ್ದಲು ಸಾಗಿಸಲು ಮತ್ತು ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲನ್ನು ಸಾಗಿಸಲು ತೆಗೆದುಕೊಳ್ಳುವ ಸಮಯವನ್ನು ಕಡಿತಗೊಳಿಸಲು ರೈಲ್ವೆ ಇಲಾಖೆಯೂ "ಯುದ್ಧೋಪಾದಿಯಲ್ಲಿ " ಕ್ರಕಾರ್ಯ ನಿರ್ವಹಿಸುವ ಹಿನ್ನಲೆಯಲ್ಲಿ 42 ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಈ ಎಲ್ಲಾ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದ್ದು, ಕಲ್ಲಿದ್ದಲು ಪೂರೈಕೆ ಸಹಜ ಸ್ಥಿತಿಯತ್ತ ಮರಳಿದಾಗ ಪ್ರಯಾಣಿಕ ರೈಲುಗಳ ಸೇವೆಗಳನ್ನು ಪುನಃಸ್ಥಾಪಿಸಲಾಗುತ್ತದೆ ಎಂದು ಭಾರತೀಯ ರೈಲ್ವೇಯ ಕಾರ್ಯನಿರ್ವಾಹಕ ನಿರ್ದೇಶಕ ಗೌರವ್ ಕೃಷ್ಣ ಬನ್ಸಾಲ್ ತಿಳಿಸಿದ್ದಾರೆ.
ಛತ್ತೀಸ್ಗಢದಲ್ಲಿ ಮೂರು ರೈಲು ರದ್ದು ಮಾಡಲಾಗಿತ್ತು. ಆದರೆ ಸ್ಥಳೀಯ ಸಂಸದರ ಪ್ರತಿಭಟನೆ ಬಳಿಕ ಮತ್ತೆ ರೈಲು ಸೇವೆ ಆರಂಭಿಸಲಾಗಿದೆ.
"ಇಡೀ ಭಾರತದ ಪರಿಸ್ಥಿತಿಯು ಭೀಕರವಾಗಿದೆ. ನಾವು ಒಟ್ಟಾಗಿ ಪರಿಹಾರವನ್ನು ಶೀಘ್ರವಾಗಿ ರೂಪಿಸಬೇಕಾಗಿದೆ. ಈ ಪರಿಸ್ಥಿತಿಯನ್ನು ಪರಿಹರಿಸಲು ತಕ್ಷಣವೇ ಅತ್ಯುತ್ತಮ ಕ್ರಮಗಳ ಅಗತ್ಯವಿದೆ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.