ಬೆಂಗಳೂರು,ಏ 29 (DaijiworldNews/MS): ಇಲ್ಲಿವರೆಗೆ ಬಂಧಿತರರು ಸಣ್ಣ ಮೀನುಗಳಷ್ಟೆ, ನಿಜವಾದ ತಿಮಿಂಗಲಗಳ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಸರ್ಕಾರಿ ಹುದ್ದೆಯ ಆಕ್ಷಾಂಕ್ಷಿಗಳಿಂದ ವಸೂಲಿ ಮಾಡಲಾದ ಹಣ ಯಾರಿಗೆ ತಲುಪಿದೆ. ಬೆಂಗಳೂರಿನಲ್ಲಿ ಅದನ್ನು ಪಡೆದುಕೊಂಡವರು ಯಾರು, ಯಾರ್ಯಾರಿಗೆ ಎಷ್ಟು ಪಾಲು ಹೋಗಿದೆ ಎಂಬುವುದರ ಕುರಿತು ತನಿಖೆಯಾಗಬೇಕು ಎಂದು ಎಂದು ಪಿಎಸ್ಐ ನೇಮಕಾತಿ ಹಗರಣದಲ್ಲಿ ಪ್ರಮುಖ ಆರೋಪಿ ದಿವ್ಯ ಹಾಗರಗಿ ಬಂಧನದ ಕುರಿತು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಬಂಧಿತರು ಡೀಲ್ ಕುದುರಿದ ಮೇಲೆ ಹಣ ವಸೂಲಿ ಮಾಡಿಕೊಡುವ ಮಧ್ಯವರ್ತಿಗಳಷ್ಟೆ. ಆದರೆ ನೇಮಕಾತಿ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು ಸೇರ್ಪಡೆ ಮಾಡುವಷ್ಟು ಇವರು ಸಾಮರ್ಥ್ಯ ಹೊಂದಿದವರಲ್ಲ. ಈ ಪ್ರಕರಣದ ಹಿಂದಿರುವ ನಿಜವಾದ ತಿಮಿಂಗಲಗಳು ಯಾರೆಂಬುದು ಈವರೆಗೂ ಸಿಐಡಿ ವಿಚಾರಣೆಗೆ ಒಳಪಡಿಸಿಲ್ಲ ಅಲ್ಲದೆ ನೇಮಕಾತಿಗಾಗಿ ಅಭ್ಯರ್ಥಿಗಳಿಂದ ವಸೂಲಿ ಮಾಡಲಾದ ಕೋಟ್ಯಂತರ ರೂಪಾಯಿ ಹಣ ಎಲ್ಲಿ ಹೋಗಿದೆ ಎಂಬುವುದು ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ನಿಷ್ಪಕ್ಷಪಾತ ತನಿಖೆ ನಡೆಸಿ ಇದರ ಹಿಂದಿರುವ ಪ್ರಭಾವಿಗಳನ್ನು ಹೊರಗೆಳೆಯಬೇಕು. ತನಿಖೆ ಮೂಲಕ ಸತ್ಯ ವಿಚಾರವನ್ನು ಜನರ ಮುಂದಿಡಬೇಕು. ಅಕ್ರಮವೆಸಗಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ 57 ಸಾವಿರ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದವರನ್ನು ಶಿಕ್ಷೆಗೆ ಗುರಿ ಪಡಿಸಬೇಕು ಎಂದಿದ್ದಾರೆ.