ನವದೆಹಲಿ, ಏ 29 (DaijiworldNews/DB): ಜಮ್ಮು ಕಾಶ್ಮೀರ ಸಂಬಂಧಿಸಿದ ಯಾವುದೇ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸುವ ಹಕ್ಕು ಪಾಕಿಸ್ತಾನಕ್ಕೆ ಇಲ್ಲ ಎಂದು ಪ್ರಧಾನಿ ಜಮ್ಮು ಕಾಶ್ಮೀರ ಭೇಟಿ ಕುರಿತು ಟೀಕಿಸಿದ್ದ ಪಾಕ್ಗೆ ಭಾರತ ತಿರುಗೇಟು ನೀಡಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಹಲವು ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಿದ್ದರು. ಈ ಭೇಟಿ ಬಗ್ಗೆ ಪಾಕಿಸ್ತಾನ ಟೀಕೆ ವ್ಯಕ್ತಪಡಿಸಿತ್ತು. ಪಾಕ್ ಟೀಕೆಗೆ ತಿರುಗೇಟು ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಕೇಂದ್ರಾಡಳಿತ ಪ್ರದೇಶದ ವಿಚಾರದಲ್ಲಿ ಪಾಕ್ ಪ್ರತಿಕ್ರಿಯೆ ಅಗತ್ಯವಿಲ್ಲ. ಆ ಹಕ್ಕು ಆ ದೇಶಕ್ಕೆ ಇಲ್ಲ. ಅಲ್ಲಿ ಪ್ರಧಾನಿಯವರಿಗೆ ದೊರೆತ ಸ್ವಾಗತ ಮತ್ತು ಅಲ್ಲಿ ಆಗಿರುವ ಹೊಸ ಬದಲಾವಣೆಗಳೇ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಎಂದರು.
ಸಂವಿಧಾನದ 370ನೇ ವಿಧಿ ರದ್ದಾದ ಬಳಿಕ ಮೋದಿಯವರು ಕೆಲ ದಿನಗಳ ಹಿಂದಷ್ಟೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ 20,000 ಕೋಟಿ ರೂ. ಮೌಲ್ಯದ ಅಭಿವೃದ್ದಿ ಯೋಜನೆಗಳನ್ನು ಉದ್ಘಾಟಿಸಿದ್ದರು.