ಪಾಟ್ನಾ, ಏ 29 (DaijiworldNews/HR): ಪಾಟ್ನಾ ಗಾರ್ಡನಿಬಾಗ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ವಿಚ್ಛೇದಿತ ಪತ್ನಿ ಮತ್ತು ಮಗಳಿಗೆ ಗುಂಡಿಟ್ಟು ಹತ್ಯೆಗೈದು ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಘಟನೆಯ ದೃಶ್ಯ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ರಾಜೀವ್ ಕುಮಾರ್ ಎಂದು ಗುರುತಿಸಲಾಗಿದ್ದು,ಈ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಕೆಲವು ವರ್ಷಗಳ ಹಿಂದೆ ರಾಜೀವ್ ಅವರ ಮೊದಲ ಪತ್ನಿ ನಿಧನರಾಗಿದ್ದು, ಇವರಿಗೆ ಒಂದು ಹೆಣ್ಣು ಮಗುವೂ ಇತ್ತು. ನಂತರ ರಾಜೀವ್ ಪತ್ನಿಯ ಸಹೋದರಿ ಪ್ರಿಯಾಂಕಾ ಅವರನ್ನು ವಿವಾಹವಾಗಿದ್ದು, ಮನಸ್ಥಾಪದಿಂದ ಪರಸ್ಪರ ಒಪ್ಪಿಕೊಂಡು ವಿಚ್ಛೇದನ ಪಡೆದಿದ್ದರು.
ಇನ್ನು ಪ್ರಿಯಾಂಕಾ ಏರ್ ಫೋರ್ಸ್ ಅಧಿಕಾರಿ ಸತೀಶ್ ಎಂಬುವರ ಜೊತೆ ಎರಡನೇ ಮದುವೆ ಮಾಡಿಕೊಂಡಿದ್ದು, ಮೊದಲ ಹೆಂಡತಿಗೆ ಹುಟ್ಟಿದ ಹೆಣ್ಣು ಮಗುವನ್ನು ಪ್ರಿಯಾಂಕಾಳೇ ಆರೈಕೆ ಮಾಡುತ್ತಿದ್ದಳು ಎನ್ನಲಾಗಿದ್ದು,ಪ್ರಿಯಾಂಕಾ ಹಾಗೂ ಮಗಳು ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಅವರನ್ನು ಅಡ್ಡಗಟ್ಟಿ ರಾಜೀವ್ ಅವರಿಬ್ಬರಿಗೂ ಗುಂಡು ಹಾರಿಸಿ ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.