ಕಲಬುರ್ಗಿ, ಏ 29 (DaijiworldNews/MS): ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಅಕ್ರಮ ಪ್ರಕರಣ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಸಿಐಡಿ ಪೊಲೀಸರು ಮಹಾರಾಷ್ಟ್ರದ ಪುಣೆಯಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ದಿವ್ಯಾ ಹಾಗರಗಿ ಒಡೆತನದ ಕಲಬುರ್ಗಿಯ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಕಾಶೀನಾಥ, ಈ ಶಾಲೆಯ ಶಿಕ್ಷಕಿಯರಾದ ಅರ್ಚನಾ, ಸುನಂದಾ ಹಾಗೂ ಅಭ್ಯರ್ಥಿ ಶಾಂತಿಬಾಯಿಯನ್ನು ಕೂಡಾ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ
ಕಲಬುರ್ಗಿ ಬಿಜೆಪಿ ನಾಯಕರಿಗೆ ದಿವ್ಯಾ ಹಾಗರಗಿಯವರ ಜ್ಞಾನಜ್ಯೋತಿ ಶಾಲೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ತನಿಖೆ ವೇಳೆ ಗೊತ್ತಾಗಿತ್ತು. ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡವು ದಿವ್ಯಾ ಹಾಗರಗಿ ಅನ್ನು ಬಂಧಿಸಿದ್ದು, ಶುಕ್ರವಾರ 10 ಗಂಟೆ ಸುಮಾರಿಗೆ ಪುಣೆಯಿಂದ ಕಲಬುರಗಿಗೆ ಅವರನ್ನು ಕರೆದುಕೊಂಡು ಬರಲಾಗುವುದು ಎಂದು ಸಿಐಡಿ ಪೊಲೀಸ್ ಮೂಲಗಳು ತಿಳಿಸಿವೆ.
ಈ ಹಿಂದೆ ಅರೋಪಿ ದಿವ್ಯಾ ಹಾಗರಗಿ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ತನಿಖೆಗೆ ಅಸಹಕಾರ ತೋರಿದ ಹಿನ್ನೆಲೆ ರಾಜೇಶ್ ಹಾಗರಗಿ ಅನ್ನು ಬಂಧಿಸಿದ್ದರು. ಆದರೆ ಕಳೆದ 18 ದಿನಗಳಿಂದ ದಿವ್ಯಾ ಹಾಗರಗಿ ಮಾತ್ರ ಪೊಲೀಸರಿಂದ ತಪ್ಪಿಸಿಕೊಂಡಿದ್ದರು.