ನವದೆಹಲಿ, ಏ 28 (DaijiworldNews/SM) : ಭಾರತದಲ್ಲಿ ಬಿಸಿಲಿನ ಬೇಗೆ ಸುಡುತ್ತಿದ್ದು, ದೇಶದ ಹೆಚ್ಚಿನ ಭಾಗಗಳು ಸುಮಾರು 45 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ವರದಿ ಮಾಡಿವೆ. ಹೀಗಾಗಿ ಹವಾಮಾನ ಇಲಾಖೆಯು ಉತ್ತರ ಭಾರತದ ಕನಿಷ್ಠ ಐದು ರಾಜ್ಯಗಳಿಗೆ ಉಷ್ಣ ಅಲೆಯ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಮುಂದಿನ ಮೂರು ದಿನಗಳಲ್ಲಿ ಉತ್ತರ ಭಾರತದ ಐದು ರಾಜ್ಯಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಸುಮಾರು 2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ(IMD) ಎಚ್ಚರಿಸಿದೆ.
ರಾಜಸ್ಥಾನ, ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ಒಡಿಶಾದಲ್ಲಿ ಉಷ್ಣ ಅಲೆಯ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ರಾಜ್ಯಗಳ ಕೆಲವು ಭಾಗಗಳು 45 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ತಾಪಮಾನವನ್ನು ದಾಖಲಿಸುತ್ತಾ ಇರುವುದರಿಂದ ಉಷ್ಣ ಅಲೆಯ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ತೀವ್ರ ಪರಿಸ್ಥಿತಿಯು ಮೇ ಮೊದಲ ವಾರದವರೆಗೆ ಮುಂದುವರಿಯುವ ಸಾಧ್ಯತೆಯಿದ್ದು, ನಂತರ ಮಳೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಐಎಂಡಿ ವಿಜ್ಞಾನಿ ಆರ್ಕೆ ಜೆನಮಣಿ ಅವರು ಮಾಹಿತಿ ನೀಡಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನವು 44 ಡಿಗ್ರಿ ಸೆಲ್ಸಿಯಸ್ಗೆ ತಲುಪಲಿದೆ ಎಂದು ಹವಾಮಾನ ಇಲಾಖೆ ಕಚೇರಿ ಮುನ್ಸೂಚನೆಯನ್ನು ನೀಡಿದೆ.
ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ವಿದ್ಯುತ್ ಬೇಡಿಕೆಯಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ. ರಾಜಸ್ಥಾನವು ಕಾರ್ಖಾನೆಗಳಿಗೆ ನಾಲ್ಕು ಗಂಟೆಗಳ ಕಾಲ ವಿದ್ಯುತ್ ಕಡಿತವನ್ನು ನಿಗದಿಪಡಿಸಲಾಗಿದೆ. ತೀವ್ರ ಉಷ್ಣಾಂಶದ ಕಾರಣ ಪಶ್ಚಿಮ ಬಂಗಾಳವು ಶಿಕ್ಷಣ ಸಂಸ್ಥೆಗಳಿಗೆ ಬೇಸಿಗೆಯ ಆರಂಭದಲ್ಲಿ ರಜೆಯನ್ನು ಘೋಷಿಸಿದೆ. ವರದಿಗಳ ಪ್ರಕಾರ ರಾಜ್ಯದ ಶಾಲಾ-ಕಾಲೇಜುಗಳನ್ನು ಮೇ 2 ರೊಳಗೆ ಬಂದ್ ಮಾಡುವಂತೆ ಆದೇಶಿಸಲಾಗಿದೆ ಎಂದು ತಿಳಿದು ಬಂದಿದೆ.