ಬೆಂಗಳೂರು, ಏ 28 (DaijiworldNews/SM) : ಪ್ರಧಾನಿ ನರೇಂದ್ರ ಮೋದಿಯವರು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಇಳಿಸಿ, ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡುವಂತೆ ನೀಡಿದ ರಾಷ್ಟ್ರಹಿತದ ಕರೆಯನ್ನು ಬಿಜೆಪಿಯೇತರ ರಾಜ್ಯ ಸರಕಾರಗಳು ಕ್ಷುಲ್ಲಕ ರಾಜಕಾರಣಕ್ಕಾಗಿ ತಳ್ಳಿ ಹಾಕಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳು ರಚನಾತ್ಮಕ ಕಾರ್ಯಕ್ರಮಗಳ ಬಗ್ಗೆ ಗಂಭೀರವಾಗಿಲ್ಲ. ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ರಾಜಕೀಯದಲ್ಲಿಯೇ ಮುಳುಗಿವೆ. ಕೋವಿಡ್ ಸಂಕಷ್ಟದ ನಡುವೆಯೂ ಮೋದಿಯವರು ಅಭಿವೃದ್ಧಿ ಪರ ರಾಜಕಾರಣಕ್ಕೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಿಕೊಂಡು ಬರುತ್ತಿದ್ದಾರೆ ಎಂದರು.
ಹಿಂದೊಮ್ಮೆ ಕೇಂದ್ರ ಸರಕಾರ ತೈಲೋತ್ಪನ್ನಗಳ ಮೇಲಿನ ತೆರಿಗೆ ಇಳಿಸಿತ್ತು. ಆಗ ಕರ್ನಾಟಕ ಸರಕಾರ ಕೂಡಾ ಅದಕ್ಕೆ ಪೂರಕವಾಗಿ ಸ್ಪಂದಿಸಿ, ತನ್ನ ಜನಪರತೆಯನ್ನು ತೋರಿಸಿತ್ತು. ದೇಶವು ಕಳೆದ ಎಂಟು ವರ್ಷಗಳಲ್ಲಿ ವಿಶ್ವದ ಮೂರನೇ ಬೃಹತ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, 10 ಟ್ರೆಲಿಯನ್ ಮೊತ್ತದ ಆರ್ಥಿಕತೆಯನ್ನು ಬೆಳೆಸುವ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದೆ. ಇದು ಕೆಲವೇ ವರ್ಷಗಳಲ್ಲಿ ಸಾಕಾರಗೊಳ್ಳಲಿದೆ ಎಂದು ಇದೇ ಸಂದರ್ಭದಲ್ಲಿ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.